

ಪಣಜಿ: ಬೆಳಗಾವಿ-ಚೋರ್ಲಾ ಗೋವಾ ಹೆದ್ದಾರಿಯ ಕುಸಮಳಿ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಜುಲೈ 1 ರಿಂದ ವಾಹನ ಓಡಾಟಕ್ಕೆ ಚಾಲನೆ ನೀಡಲಾಗಿದೆ. ಸದ್ಯ ಸೇತುವೆಯ ಮೇಲೆ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಮಾತ್ರ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಭಾರಿ ವಾಹನಗಳಿಗೆ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಭಾರಿ ವಾಹನಗಳ ಓಡಾಟಕ್ಕೆ ಖಾನಾಪುರ ಬೆಳಗಾವಿ ಬದಲಿ ಮಾರ್ಗದಲ್ಲಿ ಓಡಾಟಕ್ಕೆ ಸೂಚನೆ ನೀಡಲಾಗಿದೆ. ಮಲಪ್ರಭಾ ನದಿಯ ಈ ಸೇತುವೆಯ ಕಾಮಗಾರಿ ಇನ್ನೂ ಬಾಕಿ ಇದ್ದು, ಪೂರ್ಣಗೊಂಡ ನಂತರ ಭಾರಿ ವಾಹನಗಳ ಓಡಾಟಕ್ಕೂ ಅವಕಾಶ ಲಭಿಸಲಿದೆ.
ಬೆಳಗಾವಿ-ಗೋವಾ ರಸ್ತೆಯಲ್ಲಿರುವ ಕುಸಮಳಿಯಲ್ಲಿರುವ ಮಲಪ್ರಭಾ ನದಿಗೆ ನಿರ್ವಿುಸಲಾಗಿದ್ದ ಬ್ರಿಟಿಷ್ ಕಾಲದ ಸೇತುವೆ ಅಜೀರ್ಣಾವಸ್ಥೆಗೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಇಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಬ್ರಿಟಿಷ್ ಕಾಲದ ಸೇತುವೆಯನ್ನು ತೆರವುಗೊಳಿಸಿ ಹೊಸ ಸೇತುವೆ ನಿರ್ವಣಗೊಳಿಸಲಾಗಿದೆ.
ಸೇತುವೆಯು 10 ಮೀಟರ್ ಉದ್ದ ಹಾಗೂ ಐದೂವರೆ ಮೀಟರ್ ಅಗಲವಿದೆ. ಸೇತುವೆಯ ನಿರ್ಮಾಣ ಸಂದರ್ಭದಲ್ಲಿ ಪಕ್ಕದಲ್ಲಿ ವಾಹನ ಸಂಚಾರಕ್ಕೆ ನದಿಗೆ 10 ಪೈಪ್ ಹಾಕಿ ಮಣ್ಣಿನ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ, ಕಳೆದ ಹದಿನೈದು ದಿನಗಳ ಹಿಂದೆ ಭಾರಿ ಮಳೆಗೆ ಈ ತಾತ್ಕಾಲಿನ ಮಣ್ಣಿನ ಸೇತುವೆ ಕೊಚ್ಚಿ ಹೋಗಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ಕಳೆದ ಕೆಲದಿನಗಳಿಂದ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಇದೀಗ ಈ ಮುಖ್ಯ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವುದರಿಂದ ಬೆಳಗಾವಿ- ಗೋವಾ ವಾಹನ ಸಂಚಾರ ಸುಗಮಗೊಂಡಂತಾಗಿದೆ.