

ನೆಲಮಂಗಲ: ರಾಜ್ಯರಾಜಧಾನಿ ಸನಿಹದ ತಾಲೂಕು ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ ಮೂಲಕ ಸಾಹಿತ್ಯದ ಬೆಳವಣಿಗೆಗೆ ಕಸಾಪ ಕಾರಣವಾಗಬೇಕು ಎಂದು ಶ್ರೀ ಸಿದ್ದಲಿಂಗಸ್ವಾಮೀಜಿ ತಿಳಿಸಿದರು.
ನಗರದ ಬಸವಣ್ಣ ದೇವರಮಠದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜತೆಗೆ ಅನೇಕ ಕನ್ನಡಪರ ಸಂಘಟನೆಗಳ ಹೋರಾಟದಿಂದಾಗಿ ಅನೇಕ ಹಕ್ಕು ದೊರೆತಿವೆ. ನಾಡುನುಡಿ ಬೆಳವಣಿಗೆ ಸಾಧ್ಯವಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ತಾಲೂಕಿನ ಸಾಹಿತಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವ ಕಸಾಪ ಕಾರ್ಯ ಮಾದರಿ ಎಂದರು.
ಕರೊನಾ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭಾರಿ ಹಿನ್ನಡೆಯಾಗಿದೆ. ಪುರಸ್ಕೃತ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯರಾಗಿ ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು.
ರಾಜ್ಯದಲ್ಲಿ 7.5 ಲಕ್ಷ ಮಂದಿ ಕಸಾಪ ಸದಸ್ಯ ಇದ್ದು, ಸರ್ಕಾರದ ಅನುದಾನಕ್ಕಾಗಿ ಕಾಯದೇ ಪ್ರತಿ ತಾಲೂಕು ಹಂತದಲ್ಲೂ ಕನ್ನಡ ಭವನ ನಿರ್ಮಾಣ ಮಾಡಬೇಕಿದೆ. ಇದಕ್ಕಾಗಿ ಗ್ರಾಮೀಣಭಾಗದಲ್ಲಿರುವ ಸರ್ಕಾರಿ ಜಮೀನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಚಿ.ಮಾ.ಸುಧಾಕರ್ ಮಾತನಾಡಿ, ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನ ಸೇರಿ ರಾಷ್ಟ್ರಮಟ್ಟದ ಹಳಗನ್ನಡ, ದಲಿತ ಸಾಹಿತ್ಯ ಸಮ್ಮೇಳನಗಳನ್ನು ಮಾಡಿಕೊಂಡು ಬರುತ್ತಿರುವುದು ಒಂದೆಡೆಯಾದರೆ ದೇವನಹಳ್ಳಿಯಲ್ಲಿ ಜಿಲ್ಲಾ ಕನ್ನಡಭವನ ನಿರ್ಮಿಸಲಾಗುತ್ತಿದೆ. ತಾಲೂಕು ಹಂತದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಬೇಕಿದೆ ಎಂದರು.
ಅಧಿಕಾರ ಹಸ್ತಾಂತರ: ಕನ್ನಡಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಜಿ.ಉಮೇಶ್‌ಗೌಡ ನೂತನ ಅಧ್ಯಕ್ಷ ಸಿ.ಕೇಶವಮೂರ್ತಿ ಅವರಿಗೆ ಕನ್ನಡ ಧ್ವಜದ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಪ್ರತಿಭಾಪುರಸ್ಕಾರ: ತಾಲೂಕಿನ 15 ಮಂದಿ ಕವಿಗಳು, ವಿವಿಧ ಕ್ಷೇತ್ರಗಳ 15 ಮಂದಿ ಸಾಧಕರು, ಕಸಾಪದ 12 ಮಂದಿ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಕನ್ನಡಭಾಷಾ ವಿಷಯದಲ್ಲಿ ಅತ್ಯಧಿಕ ಅಂಕಗಳಿಸಿದ ತಾಲೂಕಿನ ವಿವಿಧ ಪ್ರೌಢಶಾಲೆ ಹಾಗೂ ದ್ವಿತೀಯ ಪಿಯುಸಿಯ 60 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕ್ಷೇತ್ರ ಶಿಕ್ಷಣಾಧೀಕಾರಿ ಕೆ.ಸಿ.ರಮೇಶ್, ಪೊಲೀಸ್ ವೃತ್ತ ನಿರೀಕ್ಷಕ ಶಿವಣ್ಣ, ನಗರಸಭೆ ಪೌರಾಯುಕ್ತ ಎಲ್.ಮಂಜುನಾಥ್, ಸಮಾಜ ಕಲ್ಯಾಣಾಧಿಕಾರಿ ವಿ.ಎಸ್.ಶಿವಣ್ಣ, ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಗಂಗರಾಜು, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾವತಿ, ಮಾಜಿ ಅಧ್ಯಕ್ಷ ಹೊನ್ನಶಾಮಯ್ಯ, ಡಿ.ಸಿದ್ದರಾಜು, ಖಲೀಮುಲ್ಲಾ, ಎನ್.ರಾಜಶೇಖರ್, ಎನ್.ಜಿ.ಗೋಪಾಲ್, ಮುಖಂಡ ಬಿ.ರಮೇಶ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮುಜೋಗಿಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.