ಪುರಸಭೆ ವ್ಯಾಪ್ತಿಯ ಶನೈಶ್ಚರ ದೇವಸ್ಥಾನ ಸಮೀಪ ಅಕ್ರಮ ಮನೆಗಳ ನಿರ್ಮಾಣ!

20201012_135319
Published on

ಮಧುಗಿರಿ:ಪುರಸಭೆ ವ್ಯಾಪ್ತಿಯ ಶನೈಶ್ಚರ ದೇವಸ್ಥಾನ ಸಮೀಪದ ಸ.ನಂ.15ರ ಕಂದಾಯ ಇಲಾಖೆ ಜಾಗದಲ್ಲಿ ಅಕ್ರಮ ನಿವೇಶನಗಳನ್ನು ನಕಲಿ ಹಕ್ಕು ಪತ್ರ ಸೃಷ್ಟಿಸಿ ವಿತರಿಸಲಾಗಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ, ಪುರಸಭೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಸೋಮವಾರ ಸ್ಥಳ ಪರಿಶೀಲಿಸಿದವು. ತಹಸೀಲ್ದಾರ್ ಡಾ.ಜಿ.ವಿಶ್ವನಾಥ್ ಸೇರಿ ವಿವಿಧ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬಂದಾಗ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿದ್ದವರೆಲ್ಲ ಓಡಿ ಹೋದರು.

ಶನೈಶ್ಚರ ದೇವಸ್ಥಾನ ಸಮೀಪವಿರುವ ಸ.ನಂ.15ರಲ್ಲಿ ಸಾರ್ವಜನಿಕರು ಅತಿಕ್ರಮ ಪ್ರವೇಶಿಸಿ ಮನೆಗಳನ್ನು ನಿರ್ಮಿಸಲು ಮುಂದಾಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಹಸೀಲ್ದಾರ್ ಡಾ.ಜಿ.ವಿಶ್ವನಾಥ್ ತಿಳಿಸಿದರು.

ಪ್ರಕರಣ ಬೆನ್ನತ್ತಿದಾಗ ಸಾಕಷ್ಟು ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂತು. ಇಲ್ಲಿ ಸರ್ಕಾರಿ ಹಾಸ್ಟೆಲ್ ನಿರ್ಮಾಣಕ್ಕೆ ಜಾಗ ನೀಡಿರುವುದನ್ನು ಹೊರತುಪಡಿಸಿದರೆ ಉಳಿದ ಜಾಗ ಸರ್ಕಾರಕ್ಕೆ ಸೇರಿದೆ. ಈ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ಅತಿಕ್ರಮಣ ಪ್ರವೇಶ ನಿಷಿದ್ಧ ಎಂಬ ನಾಮಫಲಕ ಹಾಕಿಸುವಂತೆ ಪುರಸಭೆ ಮುಖ್ಯಾಧಿಕಾರಿ ಅಮರ್ ನಾರಾಯಣ್ ಅವರಿಗೆ ತಹಸೀಲ್ದಾರ್ ಡಾ.ಜಿ.ವಿಶ್ವನಾಥ್ ಸೂಚಿಸಿದರು. ಸ.ನಂ15 ಮತ್ತು 16ರ ನೀಲಿನಕ್ಷೆಯನ್ನು ್ಲೆಕ್ಸ್‌ನಲ್ಲಿ ಅಳವಡಿಸಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿ, 15ಕ್ಕೂ ಹೆಚ್ಚು ನಿವೇಶನಗಳು ಅಕ್ರಮವಾಗಿರುವುದು ಬಯಲಾಗಿದೆ. ಈ ಬಗ್ಗೆ ಪುರಸಭೆಯಲ್ಲಿ ಖಾತೆ ಯಾವ ರೀತಿಯಾಗಿದೆ ಎಂಬುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತು. ಇನ್ನಾದರೂ ಸಾರ್ವಜನಿಕರು ಮೋಸಗಾರರ ಮಾತಿಗೆ ಮರುಳಾಗದೆ ದಾಖಲೆಗಳನ್ನು ಪರಿಶೀಲಿಸುವಂತೆ ತಹಸೀಲ್ದಾರ್ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದರು. ಪಿಎಸ್‌ಐ ಕಾಂತರಾಜು, ಕಂದಾಯ ಅಧಿಕಾರಿ ಸಿದ್ದರಾಜು, ಗ್ರಾಮಲೆಕ್ಕಿಗ ಶರಣಪ್ಪ ಇತರರಿದ್ದರು.

ತಹಸೀಲ್ದಾರ್ ಸಹಿ ನಕಲು!: ಯಾವುದೇ ಆಶ್ರಯ ನಿವೇಶನವನ್ನು 25 ವರ್ಷಗಳ ಪರಭಾರೆ ಮಾಡದಂತೆ ಕಾನೂನು ಇದೆ. ಪರಭಾರೆಯಾದ ಬಗ್ಗೆ ದೂರುಗಳು ಹೆಚ್ಚಾಗಿ ಕೇಳಿ ಬಂದವು. ಅಮಾಯಕರು ಮೋಸ ಹೋಗಿದ್ದಾರೆ ಎಂಬುದು ಸುಳ್ಳು, ನಾನು ಇಲ್ಲೇ ಹಣ ನೀಡಿದೆ ಎಂದು ಹೇಳ್ತಾರೆ. ಈ ಜಾಗ ಯಾರಿಗೆ ಸೇರಿದೆ ಎಂಬ ಕನಿಷ್ಠ ಜ್ಞಾನ ಬೇಡವೇ. ಈ ಅಕ್ರಮ ಪ್ರಕರಣ’ ಬಗೆದಷ್ಟೂ ದೊಡ್ಡದಾಗುತ್ತಿದೆ. ಮೃತ ತಹಸೀಲ್ದಾರ್ ಒಬ್ಬರ ಸಹಿಯನ್ನು ನಕಲು ಮಾಡಿ ಆಶ್ರಯ ಹಕ್ಕುಪತ್ರಗಳನ್ನು ವಿತರಣೆ ಮಾಡಿರುವ ದೂರುಗಳು ಕೇಳಿಬಂದಿದೆ. ಈ ಬಗ್ಗೆ ಪೊಲೀಸರ ಮೂಲಕ ತನಿಖೆ ನಡೆಸಿ ಅಕ್ರಮ ಸಾಬೀತಾದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದೆಂದು ತಹಸೀಲ್ದಾರ್ ಡಾ.ಜಿ.ವಿಶ್ವನಾಥ್ ತಿಳಿಸಿದರು.

194 ನಿವೇಶನಕ್ಕೆ 400 ಹಕ್ಕುಪತ್ರ!: ಸ.ನಂ.16ರಲ್ಲಿ 30/40ರ ಅಳತೆಯಲ್ಲಿ 194 ಆಶ್ರಯ ನಿವೇಶನಕ್ಕೆ 400 ಹಕ್ಕುಪತ್ರ ನೀಡಲಾಗಿದೆ. ಆದರೆ, ಕೆಲವು ಹಕ್ಕು ಪತ್ರಗಳಲ್ಲಿ ದಿನಾಂಕ ನಮೂದಿಸಿಲ್ಲ. ಈ ಬಗ್ಗೆ ತನಿಖೆಯಾದರೆ ಇದರ ಹಿಂದಿರುವ ಪುರಸಭೆ ಅಧಿಕಾರಿ, ಇವರಿಗೆ ಸಹಕರಿಸಿದವರು ಜೈಲು ಪಾಲಾಗುತ್ತಾರೆಂಬ ಮಾತುಗಳು ಕೇಳಿ ಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net