ವಿದ್ಯಾಗಿರಿಗೆ ಉದ್ಯಮಿಯಿಂದ ತಂಗುದಾಣ ನಿರ್ಮಾಣ

vidyagiri
ಬಂಟ್ವಾಳದ ಉದ್ಯಮಿಯೊಬ್ಬರು ವಿದ್ಯಾಗಿರಿಯಲ್ಲಿ ತಮ್ಮ ಕೊಡುಗೆಯಾಗಿ ತಂಗುದಾಣ ನಿರ್ಮಾಣಕ್ಕೆ ಮುಂದಾಗಿದ್ದಾರೆ.
Published on

ಬಂಟ್ವಾಳ: ಇಲ್ಲಿನ ಬಂಟ್ವಾಳ-ಮೂಡುಬಿದಿರೆ ರಸ್ತೆಯ ವಿದ್ಯಾಗಿರಿಯಲ್ಲಿ ಪ್ರಯಾಣಿಕರ ತಂಗುದಾಣವಿಲ್ಲದೆ ವಿದ್ಯಾರ್ಥಿಗಳು ಮಳೆ- ಬಿಸಿಲಿದ್ದರೂ ರಸ್ತೆ ಬದಿಯಲ್ಲೇ ಬಸ್ಸಿಗೆ ಕಾಯುವ ಸ್ಥಿತಿ ಇದ್ದು, ಸದ್ಯ ಬಂಟ್ವಾಳದ ಉದ್ಯಮಿಯೊಬ್ಬರು ವಿದ್ಯಾಗಿರಿಯಲ್ಲಿ ತಮ್ಮ ಕೊಡುಗೆಯಾಗಿ ತಂಗುದಾಣ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಬಂಟ್ವಾಳದಲ್ಲಿ ಫರ್ನೀಚರ್ ಉದ್ಯಮ ನಡೆಸುತ್ತಿರುವ ನಾಗೇಶ್ ಸಾಲ್ಯಾನ್ ಅವರೇ ತಂಗುದಾಣ ನಿರ್ಮಾಣಕ್ಕೆ ಮುಂದಾಗಿ ಈಗಾಗಲೇ ಅಡಿಪಾಯದ ಕೆಲಸ ಆರಂಭಗೊಂಡಿದೆ. ಈ ಭಾಗದಲ್ಲಿ ಹಿಂದೆ ಒಂದು ತಂಗುದಾಣವಿದ್ದು, ಅದು ಮರ ಬಿದ್ದು ನಾಶವಾಗಿತ್ತು.

ಹೀಗಾಗಿ ಸ್ಥಳೀಯ ವಿದ್ಯಾಸಂಸ್ಥೆಗಳ ನೂರಾರು ವಿದ್ಯಾರ್ಥಿಗಳು ಮಳೆ-ಬಿಸಿಲಿನ ಸಂದರ್ಭ ರಸ್ತೆ ಬದಿಯಲ್ಲೇ ನಿಂತು ಕಾಯಬೇಕಾದ ಸ್ಥಿತಿ ಉಂಟಾಗಿತ್ತು. ವಿದ್ಯಾಗಿರಿಯಿಂದ ಬಿ.ಸಿ.ರೋಡು ಹಾಗೂ ಸಿದ್ದಕಟ್ಟೆ ಎರಡೂ ಭಾಗಕ್ಕೂ ತೆರಳುವ ವಿದ್ಯಾರ್ಥಿಗಳು ಕೂಡ ಬಸ್ಸಿಗಾಗಿ ರಸ್ತೆ ಬದಿಯಲ್ಲೇ ಕಾಯುತ್ತಿದ್ದರು. ಹೆಚ್ಚಿನ ವಿದ್ಯಾರ್ಥಿಗಳು ಇರುವುದರಿಂದ ಒಂದೇ ಬಸ್ಸಿನಲ್ಲಿ ಹೋಗಲು ಸಾಧ್ಯವಾಗದೆ ಹೆಚ್ಚು ಹೊತ್ತು ರಸ್ತೆ ಬದಿಯಲ್ಲೇ ನಿಲ್ಲಬೇಕಿತ್ತು. ಹೀಗಾಗಿ ಈ ಭಾಗದಲ್ಲಿ ಪ್ರಯಾಣಿಕರ ತಂಗುದಾಣ ಬೇಕು ಎಂಬ ಬೇಡಿಕೆ ಕೇಳಿ ಬಂದಿತ್ತು.

ವಿದ್ಯಾಗಿರಿ ಪ್ರದೇಶವು ಬಂಟ್ವಾಳ ಪುರಸಭೆ ಹಾಗೂ ಅಮ್ಟಾಡಿ ಗ್ರಾ.ಪಂ.ನ ಗಡಿ ಪ್ರದೇಶವಾಗಿದ್ದು, ಎರಡೂ ಸ್ಥಳೀಯ ಸಂಸ್ಥೆಗಳ ಮೂಲಕ ತಂಗುದಾಣ ನಿರ್ಮಾಣಕ್ಕೆ ಅನುದಾನವಿರಲಿಲ್ಲ. ಹೀಗಾಗಿ ಸ್ಥಳೀಯ ಪುರಸಭಾ ಸದಸ್ಯ ಗಂಗಾಧರ ಪೂಜಾರಿ ತಂಗುದಾಣ ನಿರ್ಮಾಣಕ್ಕೆ ಸಹಕಾರ ನೀಡುವ ಕುರಿತು ಪ್ರಯತ್ನ ಪಟ್ಟಿದ್ದರು. ಪ್ರಸ್ತುತ ನಾಗೇಶ್ ಸಾಲ್ಯಾನ್ ತಂಗುದಾಣ ನಿರ್ಮಿಸಲು ಉದ್ದೇಶಿಸಿರುವ ಸ್ಥಳವು ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಗೆ ಸೇರಿರುವುದರಿಂದ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಳೀಯ ಸದಸ್ಯರ ಜತೆ ಮಾತುಕತೆ ನಡೆಸಿ ಗ್ರಾ.ಪಂ.ಗೆ ಪತ್ರ ನೀಡಿ ಅವರ ಅನುಮತಿ ಪಡೆದು ತಂಗುದಾಣ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ.

ತಂಗುದಾಣಕ್ಕೆ ತಗಲುವ ವೆಚ್ಚದ ಕುರಿತು ಆಲೋಚನೆ ಮಾಡಿಲ್ಲ. ಅದನ್ನು ಸೇವಾ ರೂಪದಲ್ಲಿ ಮಾಡುವುದರಿಂದ ಸಣ್ಣದಾಗಿ ಮಾಡದೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಉತ್ತಮ ರೀತಿಯಲ್ಲಿ ನಿರ್ಮಿಸುವಂತೆ ಇಂಜಿನಿಯರ್ ಬಳಿ ತಿಳಿಸಿದ್ದೇವೆ. ಗೋಡೆ ಕೆಲಸ ಪೂರ್ಣಗೊಂಡ ಬಳಿಕ ಮೇಲ್ಛಾವಣಿಯನ್ನು ಕಬ್ಬಿಣದ ಟ್ರಸ್ ರೀತಿಯಲ್ಲಿ ಮಾಡಲಾಗುತ್ತದೆ.- ನಾಗೇಶ್ ಸಾಲ್ಯಾನ್, ಸೌತಡ್ಕ ಫರ್ನೀಚರ್ಸ್, ಬಂಟ್ವಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net