ಸಾರ್ವಜನಿಕ ಆಸ್ಪತ್ರೆಯಲ್ಲಿ ಹೈಟೆಕ್ ಲ್ಯಾಬ್ ನಿರ್ಮಾಣಕ್ಕೆ ಚಾಲನೆ

 ಹೊಳೆನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಶಾಸಕ ಎಚ್.ಡಿ.ರೇವಣ್ಣ ವೀಕ್ಷಿಸಿದರು.
ಹೊಳೆನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಶಾಸಕ ಎಚ್.ಡಿ.ರೇವಣ್ಣ ವೀಕ್ಷಿಸಿದರು.
Published on

ಹೊಳೆನರಸೀಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೈಟೆಕ್ ಲ್ಯಾಬ್ ಹಾಗೂ ಐಸೋಲೇಷನ್ ವಾರ್ಡ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮೂರನೇ ಹಂತಸ್ತಿನಲ್ಲಿ ಹೈಟೆಕ್ ಲ್ಯಾಬ್ ನಿರ್ಮಾಣಕ್ಕೆ ಗುರುವಾರ ಚಾಲನೆ ನೀಡಿದ ಬಳಿಕ ಐಸೋಲೇಷನ್ ವಾರ್ಡ್ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.

ಜಿಲ್ಲೆಯಲ್ಲೇ ಹೊಳೆನರಸೀಪುರ ಸಾರ್ವಜನಿಕ ಅಸ್ಪತ್ರೆ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿದ್ದು, ಉತ್ತಮ ಸೇವೆ ನೀಡುವಲ್ಲಿ ಮೇಲ್ಪಂಕ್ತಿಯಲ್ಲಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಸುಮಾರು 27 ನುರಿತ ವೈದ್ಯರಿದ್ದು, ಇಲ್ಲಿಗೆ ಬರುವ ರೋಗಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಆಸ್ಪತ್ರೆಯಲ್ಲಿರುವ ಸೌಲಭ್ಯ ಜಿಲ್ಲಾ ಮಟ್ಟದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲ ಎಂದರು.

ಆಸ್ಪತ್ರೆ ವಿಸ್ತರಣೆಯಾಗುತ್ತಿರುವ ಕಾರಣ ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಬೇಕಿದೆ. ರೋಗಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲು ಮುಂದಿನ ದಿನಗಳಲ್ಲಿ ಲಿಫ್ಟ್ ಅಳವಡಿಸಲಾಗುವುದು. ಶೀಘ್ರವೇ ಈ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಮಾಹಿತಿ ನೀಡಿದರು.

ಪ್ರಸ್ತುತ ಹದಿನೈದನೇ ಹಣಕಾಸು ಯೋಜನೆಯಡಿ ಐವತ್ತು ಲಕ್ಷ ರೂ. ಬಂದಿದ್ದು, ಈ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆಸ್ಪತ್ರೆಗೆ ಮತ್ತಷ್ಟು ಸೌಲಭ್ಯಗಳು ಅವಶ್ಯವಿದ್ದರೆ ಅದನ್ನು ನನ್ನ ಗಮನಕ್ಕೆ ತರಬಹುದು. ಅದನ್ನೂ ಅನುಷ್ಠಾನಗೊಳಿಸಲು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಧನಶೇಖರ್, ತಾಲೂಕು ವೈದ್ಯಾಧಿಕಾರಿ ಎಚ್.ಎನ್.ರಾಜೇಶ್, ಡಾ.ಸೆಲ್ವಂ, ಡಾ.ನಾಗೇಂದ್ರ, ಡಾ.ಎಚ್.ಕೆ.ರಮೇಶ್, ಲೋಕೇಶ್, ಡಾ.ರೇಖಾ, ಗುತ್ತಿಗೆದಾರ ಟಿ.ಶಿವಕುಮಾರ್, ಪುರಸಭೆ ಸದಸ್ಯ ಕೆ.ಶ್ರೀಧರ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net