

ಮೇಲುಕೋಟೆ: ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲೂ ಮೈಸೂರಿನ ಗಾಂಧಿಚೌಕದ ಸಮೀಪದಲ್ಲಿರುವ ಹೈಕಟ್ ಶೌಚಗೃಹದ ಮಾದರಿಯಲ್ಲಿ ಶೌಚಗೃಹಗಳನ್ನು ನಿರ್ಮಿಸಲು ಸಂಕಲ್ಪ ಮಾಡಿರುವುದಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಮೈಸೂರಿನ ಮಾದರಿಯಲ್ಲೇ ಶೌಚಗೃಹ ನಿರ್ಮಿಸಿ ಎಂಬ ಭಕ್ತರ ಮನವಿಯನ್ನು ಪುರಸ್ಕರಿಸಿದ ಶಾಸಕರು, ಸೋಮವಾರ ಅಲ್ಲಿನ ಅಧಿಕಾರಿಗಳು ಹಾಗೂ ಕೊಡುಗೆಯಾಗಿ ನಿರ್ಮಿಸಿದ ತಂಡದೊಂದಿಗೆ ತೆರಳಿ ಶೌಚಗೃಹ ಪರಿಶೀಲಿಸಿದರು.
ಶೌಚಗೃಹ ವಿನ್ಯಾಸ ನಿರ್ವಹಣೆಯಿಂದ ಪ್ರಭಾವಿತರಾದ ಶಾಸಕರು, ಚೆಲುವನಾರಾಯಣನ ಕ್ಷೇತ್ರದಲ್ಲೂ ಇಂಥದೇ ಮಾದರಿಯ ಶೌಚಗೃಹಗಳನ್ನು ನಿರ್ಮಿಸುವುದರಿಂದ ನಮಗೂ ಸಾರ್ಥಕ ಭಾವನೆ ಉಂಟಾಗುತ್ತದೆ ಎಂದರು.
ಮೇಲುಕೋಟೆ ಕ್ಷೇತ್ರ ವ್ಯಾಪ್ತಿಯ ತಾಲೂಕು ಕೇಂದ್ರ ಪಾಂಡವಪುರ, ಪ್ರವಾಸಿ ತಾಣಗಳಾದ ಕುಂತಿಬೆಟ್ಟ ಹಾಗೂ ಕೆರೆತೊಣ್ಣೂರಿನಲ್ಲೂ ಇದೇ ಮಾದರಿಯ ಶೌಚಗೃಹಗಳನ್ನು ನಿರ್ಮಿಸಲು ಶ್ರಮಿಸಲಾಗುತ್ತದೆ. ಕ್ಷೇತ್ರದ ಸ್ವಚ್ಛತೆಯ ನಿರ್ವಹಣೆಗೆ ಶೌಚಗೃಹ ಪೂರಕವಾಗಿದ್ದು, ಮೊದಲ ಆದ್ಯತೆ ಶೌಚಗೃಹ ನಿರ್ಮಿಸುವುದಾಗಿದೆ ಎಂದರು.
ಮೇಲುಕೋಟೆ ಕ್ಷೇತ್ರದ ಪ್ರಸಿದ್ಧ ಪ್ರವಾಸಿ ತಾಣಗಳಾದ ಮೇಲುಕೋಟೆ, ಕೆರೆತೊಣ್ಣೂರು ಹಾಗೂ ಕುಂತಿಬೆಟ್ಟದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳ ಮೂಲಕ ನಿರಂತರ ಸ್ವಚ್ಛತೆ ಕಾಯ್ದುಕೊಳ್ಳಲು ಶ್ರಮಿಸುತ್ತೇನೆ. ಪ್ರವಾಸಿ ತಾಣಗಳ ಸ್ವಚ್ಛತೆಯ ಬಗ್ಗೆ ಖುದ್ದು ನಾನೇ ನಿಗಾ ವಹಿಸುತ್ತೇನೆ. ಶೌಚಗೃಹ ನಿರ್ಮಾಣದ ಜತೆಗೆ, ಮೇಲುಕೋಟೆಯ ಸಮಗ್ರ ಅಭಿವೃದ್ಧಿಗೂ ಆದ್ಯತೆ ನೀಡುವುದಾಗಿ ತಿಳಿಸಿದರು.
ಮೇಲುಕೋಟೆ ದರ್ಶನ್ ಟೀಂ ಮುಖ್ಯಸ್ಥೆ ಹಾಗೂ ಇನ್ಫೋಸಿಸ್ ಸ್ಟಾಟಿಸ್ಟಿಕ್ ಮ್ಯಾನೇಜರ್ ಡಾ.ಪ್ರೀತಿ ಮಹದೇವ್ ಇತರರು ಹಾಜರಿದ್ದರು.