ಚನ್ನಪಟ್ಟಣ ತಾಲೂಕು ವಂದರಗುಪ್ಪೆಯಲ್ಲಿ ಫ್ಲೈ ಓವರ್ ನಿರ್ಮಾಣ|Construction of flyover

HD Kumaraswamy
Published on

ನವದೆಹಲಿ: ಚನ್ನಪಟ್ಟಣ-ರಾಮನಗರ ನಡುವಿನ ವಂದರಗುಪ್ಪೆ ಗ್ರಾಮದ ಸಮೀಪದ ಕಿ.ಮೀ. ರೇಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಮೇಲು ಸೇತುವೆ ನಿರ್ಮಾಣ(Construction of flyover at Vandaraguppe, Channapatnam taluk) ಕ್ಕೆ ರೇಲ್ವೆ ಇಲಾಖೆ ಮಂಜೂರಾತಿ ನೀಡಿದೆ.

ಈ ಸಂಬಂಧ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ(H D Kumaraswamy) ಮನವಿಗೆ ಸ್ಪಂದಿಸಿದ ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಮೇಲು ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಾರೆ.

ಮೇಲು ಸೇತುವೆ ನಿರ್ಮಾಣಕ್ಕೆ ಸಮಗ್ರ ಯೋಜನಾ ವರದಿ (ಡಿಪಿಆರ್)ಯನ್ನು ರೇಲ್ವೆ ಇಲಾಖೆ ತಯಾರು ಮಾಡುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಆರಂಭ ಮಾಡಲಾಗುವುದು ಎಂದು ರೇಲ್ವೆ ಸಚಿವರು ಕುಮಾರಸ್ವಾಮಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಲೆವೆಲ್ ಕ್ರಾಸಿಂಗ್ 44ರಲ್ಲಿ ವಂದರಗುಪ್ಪೆ ಗ್ರಾಮವಿದ್ದು, ಪದೇ ಪದೆ ರೇಲ್ವೆ ಗೇಟ್ ಹಾಕುವುದರಿಂದ ಬಹಳ ಸಮಸ್ಯೆ ಆಗುತ್ತಿದೆ. ನಿತ್ಯವೂ ಸಾವಿರಾರು ವಾಹನಗಳು ಈ ಕ್ರಾಸಿಂಗ್ ಮೂಲಕ ಸಂಚರಿಸುತ್ತವೆ. ಹತ್ತಾರು ಗ್ರಾಮಗಳ ಜನರಿಗೆ ಅದರಲ್ಲಿಯೂ ವಿದ್ಯಾರ್ಥಿಗಳಿಗೆ ರೇಲ್ವೆ ಗೇಟು ಬೀಳುವುದರಿಂದ ಬಹಳಷ್ಟು ಅನನುಕೂಲ ಆಗುತ್ತಿದೆ. ಮುಖ್ಯವಾಗಿ ಈ ರಸ್ತೆ ತುಮಕೂರು ನಗರಕ್ಕೆ ಸಮರ್ಪಕ ಕಲ್ಪಿಸುತ್ತದೆ ಎಂದು ಮನವಿ ಪತ್ರದಲ್ಲಿ ಕುಮಾರಸ್ವಾಮಿ ಉಲ್ಲೇಖ ಮಾಡಿದ್ದರು.

ಒಮ್ಮೆ ರೇಲ್ವೆ ಗೇಟ್‌ಹಾಕಿದರೆ ಆಂಬುಲೆನ್ಸ್ ಗಳು ಕೂಡ ಮಾರ್ಗ ನಡುವೆಯೇ ನಿಲ್ಲುವುದು ಸಾಮಾನ್ಯವಾಗಿದೆ. ದಿನನಿತ್ಯವೂ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸುಮಾರು 75ಕ್ಕೂ ಹೆಚ್ಚು ರೇಲುಗಳು ಸಂಚರಿಸುತ್ತಿದ್ದು, ಪದೇ ಪದೆ ಗೇಟ್ ಹಾಕಬೇಕಾದ ಪರಿಸ್ಥಿತಿ ಇದೆ ಎಂದು ಕುಮಾರಸ್ವಾಮಿ ಅವರು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net