

ಆಳಂದ: ಕೆಲವರು ಜಾತಿ, ಧರ್ಮದ ಹೆಸರಿನಲ್ಲಿ ಕೇಸರಿ ಶಾಲು ಹಾಕಿಕೊಂಡು ಯುವಕರ ದಾರಿ ತಪ್ಪಿಸುತ್ತಿದ್ದಾರೆ. ಧರ್ಮ ರಕ್ಷಣೆ ಹಾಗೂ ಗೋ ರಕ್ಷಣೆಗೆ ಬಡ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಯಾವುದೇ ಶಾಲು ಬೇಡ, ಸಂವಿಧಾನವೊಂದು ಸಾಕು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್, ಮಾಹಿತಿ ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಧಂಗಾಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ನಿರ್ಮಾಣ ಹಾಗೂ ಪ್ರತಿಷ್ಠಾಪನಾ ಸಮತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ವಿಚಾರಗಳು ಸರ್ವಕಾಲಿಕವಾಗಿವೆ. ಅಂಬೇಡ್ಕರ್ ಅವರು ಸಮಾನತೆಗಾಗಿ ಹೋರಾಟ ನಡೆಸಿ, ತಮ್ಮ ಆದರ್ಶಗಳನ್ನು ಬಿಟ್ಟು ಹೋಗಿ ನೂರಾರು ವರ್ಷಗಳಾಗಿವೆ. ಇಂದಿಗೂ ಸಮಾನತೆಗಾಗಿ ಹೋರಾಡಬೇಕಿರುವುದು ಕಳವಳಕಾರಿ ಸಂಗತಿ ಎಂದರು.
ಸಿಎಂ ಸಲಹೆಗಾರರ ಬಿ.ಆರ್.ಪಾಟೀಲ್ ಮಾತನಾಡಿ, ವ್ಯಕ್ತಿ ಪೂಜೆ ಬೇಡ, ವಿಚಾರಧಾರೆಗಳನ್ನು ಆರಾಧಿಸೋಣ. ಶಿಕ್ಷಣದಿಂದ ಮಾತ್ರ ಬದುಕಿನಲ್ಲಿ ಏನಾದರೂ ಸಾಧನೆ ಮಾಡಬಹುದು. ಹೀಗಾಗಿ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದು ಕರೆ ನೀಡಿದರು.
ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ, ನ್ಯಾಯವಾದಿ ಬಸಣ್ಣ ಸಿಂಗೆ ಮಾತನಾಡಿದರು.
ಭಂತೆ ಅಮರಜ್ಯೋತಿ, ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ, ಕಲಬುರಗಿ, ಯಾದಗಿರಿ, ಬೀದರ್ ಹಾಲು ಉಪ್ಪಾದಕರ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್, ಗ್ರಾಪಂ ಅಧ್ಯಕ್ಷೆ ಕಾಶಿಬಾಯಿ ದೊಡ್ಡಮನಿ, ಎಸ್‌ಪಿ ಅಕ್ಷಯ್ ಹಾಕೆ, ಜಿಪಂ ಸಿಇಒ ಭಂವರಸಿಂಗ್ ಮೀನಾ, ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್, ತಾಪಂ ಇಒ ಮಾನಪ್ಪ ಕಟ್ಟಿಮನಿ, ಡಿವೈಎಸ್‌ಪಿ ಗೋಪಿ ಆರ್., ಸಿಪಿಐ ಪ್ರಕಾಶ ಯಾತನೂರ, ಪಿಎಸ್‌ಗಳಾದ ದಿನೇಶ ಟಿ, ವಾತ್ಸಲ್ಯಾ ಬಿರಾದಾರ, ಗಂಗಮ್ಮ, ಭೀಮರಾವ ಬಂಕ್ಲಿ, ಪಿಡಿಒ ವಿನೋದಕುಮಾರ ಕರಹರಿ, ಪ್ರಮುಖರಾದ ಸಿದ್ರಾಮಪ್ಪ ಪಾಟೀಲ್, ಜಗನ್ನಾಥ ಶೇಗಜಿ, ಗುರುಲಿಂಗ ಜಂಗಮ ಪಾಟೀಲ್, ಶಿವಾನಂದ ಪಾಟೀಲ್, ಸಿದ್ದಣ್ಣ ಮಾಸ್ತರ್ ಶೇಗಜಿ, ಸಿದ್ದರಾಮ ಪ್ಯಾಟಿ, ಪಿ.ದೇವರಾಜಲು, ಎಸ್.ಪಿ.ಸುಳ್ಳದ, ಕಿರಣ ದೇಶಮುಖ, ಗುರುಶರಣ ಪಾಟೀಲ್, ಆಲೂಗೌಡ ಪಾಟೀಲ್, ರಾಜಶೇಖರ ಯಕಂಚಿ, ಧರ್ಮಣ್ಣ ಪಟ್ಟಣ, ಕೃಷ್ಣ, ವಿಠ್ಠಲ ಪಟ್ಟಣ, ರಮೇಶ ಮಾಡಿಯಾಳಕರ, ನಾಗಮೂರ್ತಿ ಶೀಲವಂತ ಇತರರಿದ್ದರು.
ಅಮೃತ ಮೇಲಕೇರಿ ನಿರೂಪಣೆ ಮಾಡಿದರು. ಶಿವಲಿಂಗ ತೇಲ್ಕರ್ ಸ್ವಾಗತಿಸಿದರು. ದೇವಿಂದ್ರ ಮೇಲಕೇರಿ ವಂದಿಸಿದರು.
ಸಮಾಜದ ಎಲ್ಲ ವರ್ಗ, ಧರ್ಮ ಹಾಗೂ ಜಾತಿಯವರಿಗೆ ಸಂವಿಧಾನ ಅನ್ವಯವಾಗುತ್ತದೆ. ಇಂದು ಡಾ.ಅಂಬೇಡ್ಕರ್ ಅವರನ್ನು ಕೇಲವ ದಲಿತ ನಾಯಕರನ್ನಾಗಿ ಬಿಂಬಿಸುತ್ತಿರುವುದು ಸರಿಯಲ್ಲ. ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಅಂಬಿಗರ ಚೌಡಯ್ಯ ಸೇರಿ ಮಹಾತ್ಮರು, ಶರಣರು ಒಂದು ಜಾತಿಗೆ ಸೀಮಿತವಲ್ಲ. ಅವರ ಆದರ್ಶಗಳು ಎಲ್ಲರಿಗೂ ಮಾದರಿಯಾಗಿವೆ.
| ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ