ನಂದಿಕೇಶ್ವರನ ಪಾದದಡಿಯಲ್ಲಿ ‘ದೇವರ ಕೆರೆ’ : 2 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿದೆ ಪುಷ್ಕರಣಿ

New Project
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಪಶ್ಚಿಮ ಘಟ್ಟದ ತಪ್ಪಲಿನ ಪಲ್ಗುಣಿ ನದಿ ತೀರದ 800 ವರ್ಷಗಳ ಇತಿಹಾಸವಿರುವ ಶ್ರೀ ನಂದಿಕೇಶ್ವರ ದೇವರ ಪಾದದಡಿಯಲ್ಲಿ ದೇವರ ಕೆರೆ (ಪುಷ್ಕರಣಿ) ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ವಿಶೇಷ ಪ್ರಯತ್ನದಲ್ಲಿ ಕೆರೆ ಅಭಿವೃದ್ಧಿ ಯೋಜನೆಯಡಿ 2 ಕೋಟಿ ರೂ.ವೆಚ್ಚದಲ್ಲಿ ದೇವರ ಕೆರೆ ನಿರ್ಮಾಣವಾಗಲಿದೆ.

ಕೆರೆಯ ಸುತ್ತ 11ಮೆಟ್ಟಿಲು: ಕೆರೆಯ ಸುತ್ತ 11 ಮೆಟ್ಟಿಲುಗಳ ಆವರಣವಿದೆ. 1ಮೀಟರ್ ಅಗಲ, 6 ಮೀಟರ್ ಎತ್ತರದಿಂದ ಕೂಡಿದೆ. ಈಗಾಗಲೇ ಸ್ವಲ್ಪ ಪ್ರಮಾಣದಲ್ಲಿ ನೀರು ತುಂಬಿಕೊಂಡಿದೆ. ಮಳೆಗಾಲದಲ್ಲಿ ನೀರು ಭರ್ತಿಯಾಗಿ ನೋಡುಗರು, ಪ್ರವಾಸಿಗರನ್ನು ಆಕರ್ಷಿಸಲಿದೆ. ದೇವರ ಕೆರೆಯ ನಿರ್ಮಾಣ ಕೆಲಸವನ್ನು ಗುತ್ತಿಗೆದಾರ ನಾಗರಾಜ್ ಅವರು ಕೈಗೆತ್ತಿಕೊಂಡಿದ್ದಾರೆ.

ಸೌಲಭ್ಯ ಅಳವಡಿಕೆ: ದೇವರ ಕೆರೆಯ ಸುತ್ತ ವಾಕಿಂಗ್ ಟ್ರಾೃಕ್ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಹೂವಿನಿಂದ ಕಂಗೊಳಿಸುವ ಗಾರ್ಡನ್, ಕಾರಂಜಿ ವ್ಯವಸ್ಥೆ, ಕೆರೆಯ ಸುತ್ತ ಹಸಿರು ವನ ನಿರ್ಮಾಣಗೊಂಡು ಕೆರೆಯ ಸೌಂದರ್ಯ ಇನ್ನಷ್ಟು ಹೆಚ್ಚಿಸಲಿದೆ.

ಇತಿಹಾಸ ಪ್ರಸಿದ್ಧ ನಂದಿಕೇಶ್ವರ ದೇವಳದ ಜೀರ್ಣೋದ್ಧಾರ ಕಾರ್ಯ 1982ರಲ್ಲಿ ನಡೆದು ಎರಡು ಬ್ರಹ್ಮಕಲಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಿದ ಕ್ಷೇತ್ರ ನಂದಿಬೆಟ್ಟ. ಕ್ಷೇತ್ರದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಊರ ಪರವೂರ ಭಕ್ತರ ಕೂಡುವಿಕೆಯಿಂದ ದೇವರ ಸೇವೆ ನಡೆಯುತ್ತಿದೆ.

ನಂದಿಗುಡ್ಡೆ ಬೆಟ್ಟ ಮತ್ತು ಈಶ್ವರ ಬೆಟ್ಟದ ಮಧ್ಯದಲ್ಲಿ ದೇವರ ಕೆರೆ ರಚನೆಯಾಗುತ್ತಿದೆ. ದೇಗುಲಕ್ಕೆ ಏಳೂವರೆ ಎಕರೆ ಜಾಗವಿದೆ. ದೇವಸ್ಥಾನದ ಎರಡು ಬ್ರಹ್ಮಕಲಶೋತ್ಸವ ಅಂದಿನ ಅಧ್ಯಕ್ಷ ಜಯರಾಮ್ ಶೆಟ್ಟಿ ನೇತೃತ್ವದಲ್ಲಿ ನಡೆದಿದೆ. ದೇವಸ್ಥಾನದ ಅಧ್ಯಕ್ಷರಾಗಿ ಪಡ್ಡಂಗೆ ನಾರಾಯಣ ರೈ, ಸದಾಶಿವ ಶೆಟ್ಟಿ ಹೊಸಹೊಕ್ಲು, ಜಯರಾಮ್ ಶೆಟ್ಟಿ ಪಡಂಗಡಿ, ಯೋಗೀಶ್ ಭಟ್ ಕೊಟ್ರೋಡಿ ಸೇವೆ ಸಲ್ಲಿಸಿದ್ದಾರೆ. ಹರೀಶ್ ಕೋಟ್ಯಾನ್ ಕೆಳಗಿನ ಗರ್ಡಾಡಿ ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ನಿರಂತರ ಪೂಜೆ: ಕ್ಷೇತ್ರದಲ್ಲಿ ನಿರಂತರ ಮೂರು ದಿನ ಜಾತ್ರೋತ್ಸವ, ಧನುಪೂಜೆ, ನವರಾತ್ರಿ ಉತ್ಸವ, ಶಾರದ ಪೂಜೆ, ವರಮಹಾಲಕ್ಷ್ಮೀ ಪೂಜೆ, ಶಿವರಾತ್ರಿ ವಿಶೇಷ ರಂಗಪೂಜೆ, ಶನಿಪೂಜೆ, ದುರ್ಗಾಪೂಜೆ, ಭಜನೆ, ಸಂಕ್ರಮಣ ಅನ್ನಸೇವೆ ನಡೆಯುತ್ತದೆ. ನಂದಿಗುಡ್ಡೆಯಲ್ಲಿ ನಂದಿ ಮೂರ್ತಿಯಿದ್ದು, ಪೂಜೆ ನಡೆಯುತ್ತದೆ. ಕೊಡಮಣಿತ್ತಾಯ ಸ್ಥಾನ, ಕಲ್ಕುಡ ಕಲ್ಲುರ್ಟಿ ಕಟ್ಟೆ, ವರ್ಷಕೊಮ್ಮೆ ಕೋಲ ನಡೆಯುತ್ತದೆ.

ಅರ್ಧ ಎಕರೆ ವಿಸ್ತಾರ

ದೇವರ ಕೆರೆಯ ನಿರ್ಮಾಣದಿಂದ ಸುಮಾರು 4 ಕಿ.ಮೀ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಸುಧಾರಣೆಯಾಗಲಿದೆ. ಕೆರೆಯ ಒಟ್ಟು ಶೇಖರಣಾ ಸಾಮರ್ಥ್ಯ 0.27 ಎಂ.ಸಿಎಫ್‌ಟಿ, 0.62ಎಂ.ಸಿಎಫ್‌ಟಿ ನೀರು ಶೇಖರಣೆಯಾಗುತ್ತದೆ. ದೇವರು ಜಲಕಕ್ಕೆ ಬಂದಾಗ ದೇವರಿಗೆ ಬೇಕಾದ ಆಯಕಟ್ಟಿನಲ್ಲಿ ಪೀಠದ ಜತೆಗೆ ಮಂಟಪ ಕೂಡ ನಿರ್ಮಾಣವಾಗುತ್ತಿದೆ. ಅರ್ಧ ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣವಾಗಿದೆ. ಕಾರ್ಕಳದ ಕಪ್ಪು ಕಲ್ಲಿನಿಂದ ಕೆರೆ ಕಂಗೊಳಿಸುತ್ತಿದೆ.

ವರ್ಷಂಪ್ರತಿ ದೇಗುಲದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ. ದೇವಸ್ಥಾನದ ಜಾತ್ರೆ ನಡೆದು ದೇವರ ಜಳಕಕ್ಕೆ ದೇಗುಲದ ಇನ್ನೊಂದು ಭಾಗದಲ್ಲಿರುವ ಹಣ್ಣುಕಾಯಿ ಕೆರೆಗೆ ಹೋಗಬೇಕಾಗಿತ್ತು. ಮುಂದಿನ ಬಾರಿ ದೇವರ ಜಳಕಕ್ಕೆ ಪುಷ್ಕರಣಿ ಸಿದ್ಧವಾಗಿದೆ. ಶಾಸಕ ಹರೀಶ್ ಪೂಂಜ ಅವರ ವಿಶೇಷ ಪ್ರಯತ್ನ ಹಾಗೂ ಅವರ ಸ್ವಗ್ರಾಮದ ದೇಗುಲಕ್ಕೆ ಅವರು ನೀಡಿದ ಈ ಕೊಡುಗೆಗೆ ಕೃತಜ್ಞತೆ ಅರ್ಪಿಸುತ್ತೇನೆ. ಹರೀಶ್ ಕೋಟ್ಯಾನ್, ನಂದಿಕೇಶ್ವರ ದೇವಸ್ಥಾನ ಅಧ್ಯಕ್ಷ https://www.vijayavani.net/janardhan-poojary-elected-as-president https://www.vijayavani.net/kanyana-jatre

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net