

ದಾವಣಗೆರೆ: ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ತೇಜನಕ್ಕೆ ಪೂರಕವಾಗಿ ಹೊನ್ನಾಳಿಯಲ್ಲಿ ಸಾಂಸ್ಕೃತಿಕ ಭವನ, ನ್ಯಾಮತಿಯ ಲ್ಲಿ ಬಯಲು ರಂಗಮಂದಿರ ನಿರ್ಮಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಕುವೆಂಪು ಕನ್ನಡ ಭವನ ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಗ್ರಾಮೀಣ-ನಗರ ಸಿರಿ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.
ಹೊನ್ನಾಳಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಇಷ್ಟರಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ನ್ಯಾಮತಿ ಬಯಲು ರಂಗ ಮಂದಿರ ನಿರ್ಮಾಣಕ್ಕೆ ಈಗಾಗಲೇ 50 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಅರ್ಹ ವ್ಯಕ್ತಿಗಳನ್ನು ಸಾಹಿತ್ಯ ಪರಿಷತ್ ಗುರುತಿಸಿದರೆ ಇಲಾಖೆಯಿಂದ ಕೇಂದ್ರ ಕಚೇರಿಗೆ ಕಳುಹಿಸಲಾಗುವುದು. ಪರಿಷತ್‌ನ ಹಿರಿಯರೆಲ್ಲರೂ ಈ ಬಗ್ಗೆ ಚರ್ಚಿಸಬೇಕು. ಎಲ್ಲ ತಾಲೂಕು ಅಧ್ಯಕ್ಷರ ಸಲಹೆ ಪಡೆಯುವಂತೆ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗೆ ದುಂಬಾಲು ಬೀಳುವವರ ಸಂಖ್ಯೆ ಹೆಚ್ಚಿದೆ ಆದರೆ, ಕನ್ನಡ ಸಾಹಿತ್ಯ ಪರಿಷತ್ ಯಾವುದಕ್ಕೂ ಮಣಿಯದೆ ಗ್ರಾಮೀಣ-ನಗರ ಸಿರಿ ಪ್ರಶಸ್ತಿಗೆ ಅರ್ಹರನ್ನು ಗುರುತಿಸಿ ಗೌರವಿಸಿದೆ ಎಂದು ಶ್ಲಾಘಿಸಿದರು.
ಇಲಾಖೆಯನ್ನು ಅರಮನೆಗೆ, ಪರಿಷತ್‌ನ್ನು ಗುರುಮನೆಗೆ ಹೋಲಿಸಿದ ಅವರು ಎಲ್ಲಿ ಗುರುಮನೆ ಇರುತ್ತದೋ ಅಲ್ಲಿ ಅರಮನೆ ಸದೃಢವಾಗಿರುತ್ತದೆ ಎಂದರು.
ಸಾಹಿತಿ ಎನ್.ಟಿ.ಎರ‌್ರಿಸ್ವಾಮಿ ಅಭಿನಂದನಾ ನುಡಿಗಳನ್ನಾಡಿ ಕೋಲಾಟ, ಭಜನೆ, ನಾಟಕ, ಕಲೆ ಮತ್ತು ಸಂಸ್ಕೃತಿ ಸತ್ಯದರ್ಶನ ಮಾಡಿಸುವ ಹಳ್ಳಿಗಳು ಬಯಲು ವಿಶ್ವ ವಿದ್ಯಾಲಯಗಳಿದ್ದಂತೆ. ಇಲ್ಲಿನ ಅದ್ಭುತ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿರುವ ಪರಿಷತ್ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಗ್ರಾಮೀಣ ಸಿರಿ ಪ್ರಶಸ್ತಿಗೆ ಗ್ರಾಮೀಣ ಭಾಗದ ಅರ್ಹ ಹಾಗೂ ಅದ್ಭುತ ಪ್ರತಿಭೆಗಳನ್ನು ಗುರುತಿಸಿದ್ದೇವೆ. ಅವರೀಗಲೂ ತಮ್ಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರವರ ಕ್ಷೇತ್ರಗಳ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬೆಳಗಲಿ ಎಂದು ಆಶಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್. ಒಡೇನಪುರ ಮಾತನಾಡಿ, ಮೊಬೈಲ್, ದೂರದರ್ಶನದ ಹಾವಳಿಯಲ್ಲಿ ಕಲೆ ಮತ್ತು ಸಂಸ್ಕೃತಿ ಮರೆಯಾಗುತ್ತಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಬೇಕು. ಸಂಸ್ಕಾರವಿಲ್ಲದ ಶಿಕ್ಷಣ ಶೂನ್ಯ ಎಂದರು.
ಜನಪದ ಕವಿ ಯುಗಧರ್ಮ ರಾಮಣ್ಣ ಮಾತನಾಡಿ, ದೇಸೀ ಭಾಷೆಯ ಸೊಗಡು ಕಲಾವಂತರ ಜನವಾಣಿಯ ಮೂಲಕ ಝೇಂಕರಿಸಿ ಮನೋರೋಗ ಪರಿಹರಿಸುತ್ತದೆ.ಉಸಿರು ಹೋದ ಮೇಲೂ ಹೆಸರು ಉಳಿಯುವಂತ ಕೆಲಸವನ್ನು ಮಾಡಬೇಕು ಎಂದರು.
ಹೊನ್ನನಾಯ್ಕನಹಳ್ಳಿ ಎಚ್.ಎಸ್.ಮುರುಗೇಂದ್ರಪ್ಪ, ಬಿ.ಎಂ.ಪರಿಮಳ ಕುರ್ಕಿ, ಬಸಪ್ಪನಕಟ್ಟೆ ಕೆ.ಕೃಷ್ಣಮೂರ್ತಿ, ಮರಿಕುಂಟೆಯ ಎಂ.ಬಿ.ಉಷಾ, ಮಲೇಬೆನ್ನೂರಿನ ಜಿ.ನಾಗಭೂಷಣ, ಹೊಳೆಸಿರಿಗೆರೆಯ ಎ.ಬಿ.ಮಂಜಮ್ಮ, ಮಾದಾಪುರದ ಎಂ.ಟಿ.ತಿಮ್ಮಪ್ಪ, ನಲ್ಕುದುರೆಯ ಎಂ.ಜಿ.ಶಶಿಕಲಾ, ದೊಡ್ಡೇರಿ ದುರ್ಗಮ್ಮ, ಮಾಳೇರ ದುರ್ಗಪ್ಪ, ನಾಗರಾಜಪ್ಪ ಕತ್ತಿಗೆ, ಟಿ.ನಾಗರತ್ನಮ್ಮ ಅವರಿಗೆ ಗ್ರಾಮೀಣ ಸಿರಿ ಹಾಗೂ ಕೆ.ಇಮಾಂ, ಡಿ.ಕೆ.ಮಾಧವಿ ಅವರಿಗೆ ನಗರ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಳೆಪ್ಪ ಸ್ವಾಗತಿಸಿದರು, ರೇವಣಸಿದ್ದಪ್ಪ ಅಂಗಡಿ ನಿರೂಪಿಸಿದರು.