ಅರಸು ಮಂಡಳಿ ಸಂಘದ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಚಾಲನೆ

urs mandali sangha
Published on

ಮೈಸೂರು: ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿ ಭಾನುವಾರ ಅರಸು ಮಂಡಳಿ ಸಂಘದ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಅರಸು ಮಂಡಳಿ ಸಂಘಕ್ಕೆ ಕಟ್ಟಡ ನಿರ್ಮಾಣ ಮಾಡಬೇಕು ಎಂಬುದು ಮೈಸೂರು ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಕನಸಾಗಿತ್ತು. ಅವರು ಇದ್ದಿದ್ದರೆ ಕಟ್ಟಡ ನಿರ್ಮಾಣದ ಭೂಮಿಪೂಜೆಯ ಕಾರ್ಯಕ್ರಮ ನೋಡಿ ಸಂತಸ ಪಡುತ್ತಿದ್ದರು. ‘ಸಂಘಕ್ಕೆ ನಾನು ಜಾಗ ನೀಡುತ್ತೇನೆ ಕಟ್ಟಡ ನಿರ್ಮಾಣ ಮಾಡಿ ಉಳಿಸಿ ಬೆಳೆಸಿಕೊಂಡು ಹೋಗಬೇಕು’ ಎಂಬುದು ಅವರ ಆಶಯವಾಗಿತ್ತು ಎಂದು ಹೇಳಿದರು.

ಸಂಘದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ನೆರವು ನೀಡಲು ಸಿದ್ಧನಿದ್ದೇನೆ. ಅದೇ ರೀತಿ ಎಲ್ಲರು ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಬೇಕು. ಎಲ್ಲರು ಕೈ ಜೋಡಿಸಿದಾಗ ಕಟ್ಟಡ ನಿರ್ಮಾಣ ಕಾರ್ಯ ಸುಗಮವಾಗಿ ನಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ ಮಾತನಾಡಿ, ಅರಸು ಸಮುದಾಯ ನಾಡಿಗೆ ನೀಡಿದ ಕೊಡುಗೆಯನ್ನು ಎಲ್ಲರು ಸ್ಮರಿಸಿಕೊ ಳ್ಳಬೇಕು. ಸ್ವಾತಂತ್ರೃ ಬರುವ ಮೊದಲೇ ಮೈಸೂರು ಮಹಾರಾಜರು ಮೀಸಲಾತಿ ವ್ಯವಸ್ಥೆ ಜಾರಿಗೆ ತಂದರು. ಕೃಷಿ, ಕೈಗಾರಿಕೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮೈಸೂರು ಮಹಾರಾಜರ ಕೊಡುಗೆ ಅಪಾರ ಎಂದರು.

ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ರಾಜ್ಯ ದೇಶದ ಮುಂದುವರೆದ ರಾಜ್ಯವಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ. ಅವರು ನಾಡಿಗೆ ನೀಡಿದ ಕೊಡುಗೆಯನ್ನು ರಾಜ್ಯದ ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ವೇದಿಕೆಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ನಗರ ಪಾಲಿಕೆ ಮಾಜಿ ಸದಸ್ಯೆ ಬಿ.ವಿ. ಮಂಜುನಾಥ್, ಮುಡಾ ಮಾಜಿ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್, ಸಂಘದ ಅಧ್ಯಕ್ಷ ಎಚ್‌ಎಂಟಿ ಲಿಂಗರಾಜೇ ಅರಸ್, ಗೌರವ ಕಾರ್ಯದರ್ಶಿ ಸುಮಾ ಅರಸ್, ಉಪಾಧ್ಯಕ್ಷರಾದ ಶ್ರೀಕಾಂತ್ ರಾಜೇ ಅರಸ್, ಜಯದೇವರಾಜೇ ಅರಸ್, ಅರಸು ಮಂಡಳಿ ಸಹಕಾರ ಸಂಘದ ಅಧ್ಯಕ್ಷ ಅಚ್ಚುತ್ ರಾಜೇ ಅರಸ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net