

ಹರಿಹರ: ನಗರದೊಳಗೆ ವಾಹನ ದಟ್ಟಣೆ ಕಡಿಮೆಗೊಳಿಸಲು ಹೊರ ಭಾಗದಲ್ಲಿ ಭಾಗಶಃ ಬೈಪಾಸ್ ರಸ್ತೆ ನಿರ್ಮಿಸಲಾಗುವುದೆಂದು ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಹೇಳಿದರು.
ನಗರಸಭೆಗೆ ಬುಧವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಹರಪನಹಳ್ಳಿ ರಸ್ತೆಯ ಲಕ್ಷ್ಮಿ ಪೌಂಡ್ರಿಯಿಂದ ಅಮರಾವತಿ ಕಾಲೋನಿ ಬಳಿಯ ಹಳೇ ಪಿ.ಬಿ.ರಸ್ತೆವರೆಗಿನ ರಸ್ತೆಯನ್ನು ಬೈಪಾಸ್ ರಸ್ತೆಯಾಗಿ ದೂಡಾದಿಂದ ಅಭಿವೃದ್ಧಿಪಡಿಸುತ್ತೇವೆ ಎಂದರು.
ಉಳಿದಂತೆ ನಗರಸಭೆಯಿಂದ 50 ಎಕರೆ ಜಮೀನು ಗುರುತಿಸಿದರೆ ಜಮೀನು ಖರೀದಿಸಿ ನಿವೇಶನಗಳನ್ನು ರಚಿಸಿ ಬಡ ನಿರ್ವಸತಿಕರಿಗೆ ಹಂಚಿಕೆ ಮಾಡಲಾಗುವುದು. 8ನೇ ವಾರ್ಡಿನ ಎಸ್‌ಎಸ್‌ಕೆ ಕಲ್ಯಾಣ ಮಂಟಪ ಸಮೀಪದ ಮೆಟ್ಟಿಲುಹೊಳೆ ಪ್ರದೇಶವನ್ನು ಅಭಿವೃದ್ಧಿಪಡಿಸಿ ವಿವಿಧ ದೇವಸ್ಥಾನಗಳ ದೇವ, ದೇವತೆಗಳ ಸ್ನಾನಘಟ್ಟಗಳಿಗೆ ಕಾಯಕಲ್ಪ ನೀಡಲಾಗುವುದು ಎಂದರು.
ನಗರದ ಪ್ರಮುಖ ಉದ್ಯಾನಗಳ ಅಭಿವೃದ್ಧಿಗೆ ಅನುದಾನ ನೀಡುತ್ತೇವೆ. 24ನೇ ವಾರ್ಡಿನ ಬೆಂಕಿನಗರ ಕೊಳಚೆ ಪ್ರದೇಶ ಅಭಿವೃದ್ಧಿಗೆ 30 ಲಕ್ಷ ರೂ. ಬಿಡುಗಡೆ ಮಾಡಲಾಗುವುದು. ಆಗಬೇಕಿರುವ ಕೆಲವು ತುರ್ತು ಕಾಮಗಾರಿಗಳ ಅಂದಾಜುವೆಚ್ಚ ನೀಡಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ದೂಡಾ ಕಚೇರಿ: ನಗರಸಭೆಯ ಕಚೇರಿಯ ಕಟ್ಟಡದಲ್ಲಿ ಒಂದು ಕೊಠಡಿ ಗುರುತಿಸಿದ್ದು ಅಲ್ಲಿ ದೂಡಾ ಸಿಬ್ಬಂದಿ ಪ್ರತಿ ದಿನ ಲಭ್ಯ ಇರಲಿದ್ದು, ಹರಿಹರದ ನಾಗರಿಕರು ಕಟ್ಟಡ ಪರವಾನಗಿ ಮತ್ತಿತರ ಕೆಲಸ ಕಾರ್ಯಗಳ ಸೇವೆಯನ್ನು ಇಲ್ಲಿಯೇ ಪಡೆಯಲು ಸಾಧ್ಯವಿದೆ. ಶೀಘ್ರದಲ್ಲೇ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಈ ಕಚೇರಿಗೆ ಚಾಲನೆ ನೀಡಲಿದ್ದಾರೆ. ಆ ಮೂಲಕ ಹರಿಹರದ ಜನತೆಯ ದಶಕಗಳ ಬೇಡಿಕೆಗೆ ಸ್ಪಂದಿಸಿದಂತಾಗುತ್ತಿದೆ ಎಂದರು.
ಈ ಹಿಂದೆ ದೂಡಾದಿಂದ ಹರಿಹರಕ್ಕೆ ಹೆಚ್ಚಿನ ಅನುದಾನ ನೀಡಿಲ್ಲ ಎಂಬ ಆರೋಪವಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರು ಹರಿಹರದ ಅಭಿವೃದ್ಧಿಗೆ ಒತ್ತು ನೀಡಿದ್ದು, ದೂಡಾದಿಂದ ಅಗತ್ಯ ಅನುದಾನ ಬಿಡುಗಡೆಗೊಳಿಸುತ್ತೇವೆ ಎಂದು ಉತ್ತರಿಸಿದರು.
ದೂಡಾ ಆಯುಕ್ತ ತಿಮ್ಮಣ್ಣ ಹುಲ್ಮನಿ, ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ, ಸದಸ್ಯರಾದ ಕೆ.ಜಿ.ಸಿದ್ದೇಶ್, ಆರ್.ಸಿ.ಜಾವೀದ್, ಸೈಯದ್ ಅಬ್ದುಲ್ ಅಲೀಂ, ಮುಖಂಡರಾದ ಎಲ್.ಬಿ.ಹನುಮಂತಪ್ಪ, ಸೈಯದ್ ಸನಾಉಲ್ಲಾ, ಫೈನಾನ್ಸ್ ಮಂಜಣ್ಣ, ಮೊಹಮ್ಮದ್ ಫೈರೋಜ್, ದಾದಾಪೀರ್, ಕೆ.ಆಸಿಫ್ ಉಲ್ಲಾ ಇದ್ದರು.