ಎಲ್ಲರೂ ಸಹಕರಿಸಿದರೆ ಬೈಪಾಸ್ ರಸ್ತೆ ನಿರ್ಮಾಣ

BYD-ROAD
Published on

ಬ್ಯಾಡಗಿ: ಅಂತಾರಾಷ್ಟ್ರೀಯ ಮೆಣಸಿನಕಾಯಿ ಖ್ಯಾತಿಯ ಪಟ್ಟಣದ ಮುಖ್ಯರಸ್ತೆ ವಿಸ್ತರಣೆಗೆ ಸ್ಥಳೀಯ ಮಾಲೀಕರು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಸಹಕಾರ ನೀಡಿದರೆ ರಸ್ತೆ ವಿಸ್ತರಣೆ, ಬೈಪಾಸ್, ರಿಂಗ್ ರಸ್ತೆ ನಿರ್ಮಿಸಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಇಲ್ಲಿನ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಮುಖ್ಯರಸ್ತೆ ಜಾಗದ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು. 2013ರಲ್ಲಿ ಎರಡು ಹಂತದ ಕಾಮಗಾರಿ ಪೂರ್ಣಗೊಳಿಸಿದ್ದು, ಮಧ್ಯದ 825 ಮೀಟರ್ ಮಾತ್ರ ಬಾಕಿ ಉಳಿದಿದೆ. ಬಳಿಕ ಮಾಲೀಕರು ನ್ಯಾಯಾಲಯ ಮೆಟ್ಟಲೇರಿದ ಪರಿಣಾಮ ಸ್ಥಗಿತಗೊಂಡಿತ್ತು. ಈಗ ಜಾಗದ ಮಾಲೀಕರು ರಸ್ತೆ ವಿಸ್ತರಣೆಗೆ ಸಹಕರಿಸಿದರೆ ಕಾಯ್ದೆ ಪ್ರಕಾರ ಅನುಕೂಲ ಕಲ್ಪಿಸಲಾಗುವುದು. ಜಾಗ ಕಳೆದುಕೊಂಡ ಮಾಲೀಕರಿಗೆ ಹೆಚ್ಚಿನ ಮೌಲ್ಯ ಕೊಡಿಸಲಾಗುವುದು. ನಿರಾಶ್ರಿತರಿಗೆ ಪುರಸಭೆ ಖಾಲಿ ನಿವೇಶನ, ಪುರಸಭೆ ಮಳಿಗೆ ನೀಡಲಾಗುವುದು. ಮೊದಲು ರಸ್ತೆ ವಿಸ್ತರಣೆಗೊಳಿಸಿ, ಬಳಿಕ ಬೈಪಾಸ್ ಅಭಿವೃದ್ಧಿ, ರಿಂಗ್ ರಸ್ತೆ ನಿರ್ಮಿಸಲಾಗುವುದು. ವಿಶೇಷ ಪ್ರಕರಣವೆಂದು ಪರಿಗಣಿಸಿ ಹೊಸ ಕಟ್ಟಡಕ್ಕೆ ಅನುಮತಿ ಕೊಡಿಸಲು ಕಾಯ್ದೆಗೆ ಹೊಸರೂಪ ಕೊಡಲಾಗುವುದು. ದಯಮಾಡಿ ಮಾಲೀಕರು ನ್ಯಾಯಾಲಯಕ್ಕೆ ತೆರಳಿ ಜಿದ್ದಿಗೆ ಬೀಳುವುದು ಬೇಡ ಎಂದರು.

ರಸ್ತೆ ಅಗಲೀಕರಣ ಸಮಿತಿ ಮುಖಂಡರ ಸಭೆ ನಡೆಸುತ್ತೇವೆ. ಬಳಿಕ ಇಬ್ಬರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಅಧಿಕಾರಿಗಳ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮಾತನಾಡಿ, ರಸ್ತೆ ವಿಸ್ತರಣೆಗೆ ಸ್ಥಳೀಯ ಶಾಸಕರು ಮಾಲೀಕರಿಗೂ, ಸಾರ್ವಜನಿಕರಿಗೂ ತೊಂದರೆಯಾಗದಂತೆ ಕೈಗೊಳ್ಳುವ ಒಪ್ಪಂದದ ನಿರ್ಣಯಕ್ಕೆ ಸಹಕರಿಸಬೇಕು. ಮೆಣಸಿನಕಾಯಿ ಮಾರುಕಟ್ಟೆಯಿರುವ ಕಾರಣ ವಾಹನಗಳ ಓಡಾಟ ತೀವ್ರವಾಗಿದೆ. ಬ್ಯಾಡಗಿ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯರಸ್ತೆ ವಿಸ್ತರಣೆ, ಬ್ಯಾಡಗಿ ರಾಮಗೊಂಡನಹಳ್ಳಿ ಕ್ರಾಸ್ ಮೂಲಕ ಕದರಮಂಡಲಗಿ ಮೂಲಕ ಎನ್‌ಎಚ್4 ಹಾಗೂ ಬ್ಯಾಡಗಿ ಕಾಕೋಳ ರಸ್ತೆ ಸೇರಿ ಮೂರು ಕಡೆಗಳಲ್ಲಿ ಅಭಿವೃದ್ಧಿಪಡಿಸಬಹುದು. ಭೂಮಾಲೀಕರು ಸಹಕರಿಸಿ ಎಂದು ಮನವಿ ಮಾಡಿದರು.


ಭೂಮಾಲೀಕರ ಪರವಾಗಿ ವಕೀಲ ಸಿದ್ದಲಿಂಗಪ್ಪ ಶೆಟ್ಟರ್, ಮುರಿಗೆಪ್ಪ ಶೆಟ್ಟರ್, ಸುರೇಶ ಮೇಲಗಿರಿ ಮಾತನಾಡಿ, ರಸ್ತೆ ಮಾಲೀಕರು ಸಾಕಷ್ಟು ನೋವು ಅನುಭವಿಸಿದ್ದು, ಏಳೆಂಟು ವರ್ಷಗಳಿಂದ ಮೂಲಸೌಕರ್ಯ ಕಲ್ಪಿಸಿಲ್ಲ. ನಾವು ರಸ್ತೆ ಅಭಿವೃದ್ಧಿಯ ವಿರೋಧಿಗಳಲ್ಲ, ಆದರೆ, ರಸ್ತೆ ವಿಸ್ತರಣೆ ಕಾಯ್ದೆಬದ್ಧವಾಗಿ ನಡೆಯಬೇಕು. ಜಾಗದ ಮೌಲ್ಯಕ್ಕೆ ತಕ್ಕಂತೆ ಪರಿಹಾರ ಕೊಡಿಸಬೇಕು, ಹೈಕೋರ್ಟ್ ನಿರ್ದೇಶನಗಳನ್ನು ಪಾಲಿಸಬೇಕು. ಬೈಪಾಸ್, ರಿಂಗ್ ರೋಡ್ ಕ್ರಿಯಾಯೋಜನೆ ಸಿದ್ಧವಾಗಬೇಕು. ಸ್ಥಳೀಯ ಶಾಸಕರ ಮನವಿಗೆ ನಾವು ಬದ್ಧ. ಆದರೆ, ನಿರ್ಣಯಗಳು ಕಾಯ್ದೆಬದ್ಧವಾಗಿರಬೇಕು. ಮೌಖಿಕ ನಿರ್ಣಯ ಬೇಡ, ಎಲ್ಲರ ಸಹಕಾರ ಪಡೆದ ಬಳಿಕ ಪ್ರಕ್ರಿಯೆ ಪ್ರಾರಂಭಿಸಲಿ. ಮಾಲೀಕರಿಗೆ ಅನ್ಯಾಯವಾದಲ್ಲಿ ನ್ಯಾಯಾಲಯಕ್ಕೆ ತೆರಳುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net