

ಬೇಲೂರು: ಬೆಳೆಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕಿನ ಗೆಂಡೇಹಳ್ಳಿ ಸಂತೆಯಲ್ಲಿ 1.50 ಕೋಟಿ ರೂ. ವೆಚ್ಚದದಲ್ಲಿ ಹರಾಜು ಕಟ್ಟೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ಗೆಂಡೇಹಳ್ಳಿ ಸಂತೆಯಲ್ಲಿ ಹರಾಜು ಕಟ್ಟೆ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆರ್‌ಐಡಿಎಫ್-29 ಯೋಜನೆಯಡಿ ಅಂದಾಜು 1.50 ಕೋಟಿ ರೂ.ಅನುದಾನದಲ್ಲಿ ಹರಾಜು ಕಟ್ಟೆಗೆ ಚಾಲನೆ ನೀಡಲಾಗಿದೆ.
ಬೇಲೂರು ಪಟ್ಟಣ, ಹಳೇಬೀಡು, ಗೆಂಡೇಹಳ್ಳಿ, ಬಿಕ್ಕೋಡು, ಅರೇಹಳ್ಳಿ, ಹನಿಕೆ, ಜಾವಗಲ್ ಸೇರಿದಂತೆ ಇತರೆಡೆ ರೈತರ ಉತ್ಪನ್ನಗಳ ಮಾರಾಟ ಮಾಡಲಾಗುತ್ತದೆ. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬೆ ಮಾರಾಟ ಮಾಡಲು ಬರುವ ರೈತರಿಗೆ ಸೂಕ್ತ ಸೌಲಭ್ಯ ನೀಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಬೇಲೂರಿನ ಎಪಿಎಂಸಿ ಬಹುತೇಕ ಸವಲತ್ತು ಹೊಂದಿದೆ. ಅದೇ ರೀತಿ ಇನ್ನುಳಿದ ಕಡೆಗಳಲ್ಲೂ ಸಂತೆಗಳಿಗೆ ಹೈಟೆಕ್ ಸ್ವರೂಪ ನೀಡಬೇಕೆಂಬ ನಿಟ್ಟಿನಲ್ಲಿ ಅನುದಾನಕ್ಕಾಗಿ ಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಅಲ್ಲದೆ ತಾಲೂಕಿನ ಮಲೆನಾಡು ಭಾಗದ ಗೆಂಡೇಹಳ್ಳಿ ಮಾರುಕಟ್ಟೆ ಬೇಲೂರು-ಚಿಕ್ಕಮಗಳೂರು-ಮೂಡಿಗೆರೆಗೆ ಹತ್ತಿರದ ಸಂಪರ್ಕ ಹೊಂದಿರುವ ಕಾರಣ ಇಲ್ಲಿ ಗುಣಮಟ್ಟ ಹರಾಜು ಕಟ್ಟೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಿಮಾ ಯೋಜನೆಯನ್ನು ಕಡ್ಡಾಯವಾಗಿ ಎಲ್ಲ ರೈತರು ಪಡೆಯುವಂತಾಗಬೇಕು ಎಂದರು.
ಕೇಂದ್ರ ಕಾಫಿ ಮಂಡಳಿ ಉಪಾಧ್ಯಕ್ಷ ಜಿ.ಕೆ.ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷೆ ಕಮಲಮ್ಮ, ಮಾಜಿ ಅಧ್ಯಕ್ಷ ಅಬ್ದುಲ್ ಹಕೀಂ, ಮುಖಂಡರಾದ ಸುರೇಶ್, ಜಗದೀಶ್, ದರ್ಶನ್, ರತನ್, ನವೀನ್, ಮಂಜುನಾಥ್, ರಂಜಿತ್, ರುದ್ರೇಶ್ ಸೇರಿದಂತೆ ಇತರರಿದ್ದರು.