ಪ್ಲಾಸ್ಟಿಕ್ ತ್ಯಾಜ್ಯದಿಂದ ಡಾಂಬರ್ ರಸ್ತೆ ನಿರ್ಮಾಣ

plastic road
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರಾಯೋಗಿಕವಾಗಿ ಬಳಸುವ ಮೂಲಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿನೂತನ ಹೆಜ್ಜೆ ಇಟ್ಟಿದೆ.

ಇಲ್ಲಿಯ ಲಿಂಗರಾಜನಗರದಲ್ಲಿ ಪಾಲಿಕೆ ವತಿಯಿಂದ ಕೈಗೊಂಡಿರುವ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಶನಿವಾರ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಸ್ಥಳಕ್ಕೆ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಹೆಚ್ಚುವರಿ ಆಯುಕ್ತ ಆರ್. ವಿಜಯಕುಮಾರ, ಅಧಿಕಾರಿಗಳು ಭೇಟಿ ನೀಡಿದ್ದರು.

ಅವಳಿ ನಗರದಲ್ಲಿ ನಿತ್ಯ ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೋ ಟಿಪ್ಪರ್​ಗಳು ಅದನ್ನು ಮೊದಲು ಕಾಂಪ್ಯಾಕ್ಟರ್ ಸ್ಟೇಷನ್​ಗೆ ಕೊಂಡೊಯ್ಯುತ್ತದೆ. ಅಲ್ಲಿ ಕಸದ ರಾಶಿಯಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕಿಸಲಾಗುತ್ತದೆ. ಶ್ರೆಡ್ಡಿಂಗ್ ಮೆಷಿನ್ ಸಹಾಯದಿಂದ ಪ್ಲಾಸ್ಟಿಕ್ ವಸ್ತುಗಳನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡಿ ಡಾಂಬರ್ ಮಿಶ್ರಣ ಘಟಕಕ್ಕೆ ಕಳುಹಿಸಿಕೊಡಲಾಗುತ್ತದೆ. ಈ ಪ್ಲಾಸ್ಟಿಕ್ ತುಂಡುಗಳನ್ನು ಡಾಂಬರು ಮಿಶ್ರಣ ಘಟಕದಲ್ಲಿ ಜೆಲ್ಲಿ ಮತ್ತು ಟಾರಿನ ಮಿಶ್ರಣದ ಜೊತೆ ಸೇರಿಸಲಾಗುತ್ತದೆ. ಬಿಟುಮಿನ್ (ಡಾಂಬರ್) ಜತೆಗೆ ಶೇ. 8ರಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಮಿಶ್ರಣ ಮಾಡಲಾಗುತ್ತದೆ.

ಡಾಂಬರ್​ಗಳಿಗೆ ಪ್ಲಾಸ್ಟಿಕ್ ತುಂಡುಗಳು ಮಿಶ್ರಣ ಮಾಡುವುದರಿಂದ ರಸ್ತೆಗಳ ದೃಢತೆ ಹೆಚ್ಚುವುದಲ್ಲದೇ, ರಸ್ತೆ ಮೇಲೆ ನೀರು ನಿಂತು ಬಿಟುಮಿನ್ ಹಾಳಾಗಿ ಗುಂಡಿ ಬೀಳುವುದನ್ನು ಪ್ಲಾಸ್ಟಿಕ್ ತಪ್ಪಿಸುತ್ತದೆ. ಅಲ್ಲದೇ, ಸಾಮಾನ್ಯ ಡಾಂಬರ್ ರಸ್ತೆಗಿಂತ ಪ್ಲಾಸ್ಟಿಕ್ ಮಿಶ್ರಣದ ಡಾಂಬರ್ ರಸ್ತೆ ನಿರ್ವಣಕ್ಕೆ ಪ್ರತಿ ಒಂದು ಕಿಲೋ ಮೀಟರ್​ಗೆ 1.5 ಲಕ್ಷ ರೂ. ಉಳಿತಾಯವಾಗಲಿದೆ ಎಂದು ಪಾಲಿಕೆ ಹೇಳಿದೆ.

ಮುಂದಿನ ದಿನಗಳಲ್ಲಿ ಪಾಲಿಕೆ ವತಿಯಿಂದ ನಿರ್ವಣವಾಗುವ ಎಲ್ಲ ರಸ್ತೆಗಳಲ್ಲೂ ಡಾಂಬರ್ ಜತೆಎ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಕೆ ಮಾಡಲು ಚಿಂತಿಸಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯವು ಪರಿಸರವನ್ನು ಕಲುಷಿತಗೊಳಿಸುವುದನ್ನು ತಪ್ಪಿಸಲು ಅದನ್ನು ರಸ್ತೆ ನಿರ್ವಣಕ್ಕಾಗಿ ಮರುಬಳಕೆ ಮಾಡಲಾಗುತ್ತಿದೆ ಎಂದು ಆಯುಕ್ತ ಡಾ. ರುದ್ರೇಶ ಘಾಳಿ ತಿಳಿಸಿದ್ದಾರೆ.

ಪ್ಲಾಸ್ಟಿಕ್ ತ್ಯಾಜ್ಯವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ರಸ್ತೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುವ ಸಂಪನ್ಮೂಲವಾಗಿ ಪರಿವರ್ತಿಸಿದೆ. ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಪ್ಲಾಸ್ಟಿಕ್ ಬಳಸುವ ಮೂಲಕ ಏಕಬಳಕೆಯ ಪ್ಲಾಸ್ಟಿಕ್​ನಿಂದ ಪರಿಸರಕ್ಕಾಗುವ ಹಾನಿಯನ್ನು ತಪ್ಪಿಸುವುದರ ಜೊತೆಗೆ, ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಕೂಡ ಬಳಕೆ ಮಾಡಿಕೊಳ್ಳಬಹುದೆಂದು ತೋರಿಸಿಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net