

ಮಂಡ್ಯ: ಜಿಲ್ಲೆಯ ಪ್ರಗತಿಪರ ಸಂಘಟನೆಗಳ ವಿರೋಧದ ನಡುವೆಯೂ ವಿಶ್ವವಿಖ್ಯಾತ ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ರೂಪುರೇಷೆ ಸಿದ್ಧವಾಗುತ್ತಿದೆ. ಅದರಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಹಾಗೂ ನೀಲನಕ್ಷೆಯನ್ನು ಪರಿಶೀಲಿಸಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೃಂದಾನವನ್ನು ಅಭಿವೃದ್ಧಿಪಡಿಸಲು ಈ ಹಿಂದೆ ರೂಪಿಸಿದ್ದ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ. ಬೃಹತ್ ಪ್ರತಿಮೆಗಳ ಸ್ಥಾಪನೆ ಕೈಬಿಟ್ಟು ಕೆಆರ್‌ಎಸ್ ಸಮಗ್ರ ಅಭಿವೃದ್ಧಿಗೆ ಈ ಭಾಗದ 2 ರಿಂದ 3 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಂತೆ ಕಂಟ್ರೋಲ್ ಪ್ಲಾೃನಿಂಗ್ ಅಥಾರಿಟಿ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಪ್ರಕೃತಿಯ ಸೌಂದರ್ಯ ಮತ್ತು ನೀರು ಇರುವ ಪ್ರದೇಶಗಳು ಹೆಚ್ಚು ಪ್ರವಾಸಿಗಳನ್ನು ಆಕರ್ಷಿಸುತ್ತವೆ. ಅಂತಹ ಸ್ಥಳಗಳನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸಬಹುದು. ಆದ್ದರಿಂದ ರಂಗನತಿಟ್ಟು ಪಕ್ಷಿಧಾಮವನ್ನು ಒಳಗೊಂಡಂತೆ ಕಂಟ್ರೋಲ್ ಪ್ಲಾೃನಿಂಗ್ ಅಥಾರಿಟಿ ರೂಪಿಸಲು ಚಿಂತಿಸಲಾಗಿದೆ. ಮುಂದಿನ 2-3 ದಶಕವನ್ನು ಗುರಿಯಾಗಿಸಿಕೊಂಡು ಯೋಜನೆಯ ರೂಪುರೇಷೆ ತಯಾರಿಸಲಾಗುತ್ತಿದೆ. ಭವಿಷ್ಯದಲ್ಲಿ ಉಂಟಾಗಬಹುದಾದ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಪೂರಕವಾಗಿ ಚತುಷ್ಪಥ ರಸ್ತೆ ನಿರ್ಮಾಣ, ಆಗಮನ ಮತ್ತು ನಿರ್ಗಮನ ದ್ವಾರ, ವಿದ್ಯುತ್, ಕುಡಿಯುವ ನೀರು, ವಾಣಿಜ್ಯ ಪ್ರದೇಶ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.
ಈಗಿರುವ ಬೃಂದಾವನದ ವಿಸ್ತರಣೆಯೊಂದಿಗೆ ಸುಮಾರು 200 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬೃಂದಾವನ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ ಮಾದರಿ) ಅನುಷ್ಠಾನಗೊಳಿಸುತ್ತಿರುವ ಈ ಯೋಜನೆಗೆ 2000 ಕೋಟಿ ರೂ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಆದಾಗ್ಯೂ ಯೋಜನಾ ವೆಚ್ಚವು ಬಂಡವಾಳ ಹೂಡಿಕೆದಾರರ ಅರ್ಥಿಕ ಸಾಮರ್ಥ್ಯವನ್ನು ಅವಲಂಬಿಸಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ರವಿಕುಮಾರ್ ಗಣಿಗ, ಕೆ.ಎಂ.ಉದಯ್, ರಂಗನಾಥ್, ಎಂಎಲ್‌ಸಿ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ ಇದ್ದರು.
ಡ್ಯಾಂ ಸುರಕ್ಷತೆಗೆ ಆದ್ಯತೆ
ಪಾರ್ಕ್ ನಿರ್ಮಾಣ ವಿವಿಧ ಇಲಾಖೆಗಳ ಮಾರ್ಗಸೂಚಿ ಪ್ರಕಾರದಂತೆ ಅನುಷ್ಠಾನಗೊಳ್ಳಲಿದೆ. ಅದರಂತೆ ಅಣೆಕಟ್ಟೆಯ ಸುರಕ್ಷತೆಗೂ ಆದ್ಯತೆ ನೀಡಲಾಗುವುದು. ಯೋಜನೆಯಿಂದಾಗಿ ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲಿವೆ. ಪ್ರತ್ಯಕ್ಷ-ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಯೋಜನೆಗೆ ಸಧ್ಯಕ್ಕೆ ಹಾಲಿ ಇರುವ ಸರಕಾರಿ ಜಾಗವೇ ಸಾಕು. ಅಗತ್ಯ ಬಿದ್ದರೆ ಖಾಸಗಿ ಜಮೀನನ್ನು ಪಡೆದುಕೊಳ್ಳಲಾಗುವುದು. ಕೆಲವರು ಹೇಳುವಂತೆ ಯೋಜನೆಗೆ ಯಾರದ್ದೂ ವಿರೋಧವಿಲ್ಲ. ನಮ್ಮನ್ನೂ ಕೇಳಿ, ಸಲಹೆ ಪಡೆಯಿರಿ ಎಂದು ಕೆಲವು ಸಂಘಟನೆಗಳ ಪ್ರತಿನಿಧಿಗಳು ಹೇಳುತ್ತಿದ್ದಾರೆ. ಅವರ ಸಲಹೆಗಳನ್ನೂ ಪಡೆಯಲಾಗುವುದು. ಸರ್ಕಾರದ ನಿರ್ಧಾರವೇ ಅಂತಿಮ. ಹಣ ಮಾಡಲು ಈ ಯೋಜನೆ ಮಾಡಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಮುಖಂಡರ ಆರೋಪ ಮಾಡುತ್ತಾರೆ. ಅವರು ಏನಾದರೂ ಹೇಳಲಿ. ಅವರ ಛಾಯೆಯನ್ನು ನಮ್ಮ ಮೇಲೆ ಹಾಕುತ್ತಿದ್ದಾರೆ. ದುಡ್ಡು ಮಾಡುವ ರೂಢಿ ಅವರಿಗಿದೆ ಎಂದು ತಿರುಗೇಟು ನೀಡಿದರು.