ಮೈಸೂರಿನಲ್ಲಿ ಅಂಬಾರಿ ಆನೆ ಅರ್ಜುನ ಸ್ಮಾರಕ ನಿರ್ಮಾಣ


ಮೈಸೂರು ದಸರಾ ಅಂಬಾರಿ ಆನೆಯಾಗಿದ್ದ ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಸಂಸದ ಯದುವೀರ್ ಹಾಗೂ ಶಾಸಕ ತನ್ವೀರ್ ಸೇಠ್ ಸಭೆ ನಡೆಸಿದರು.
ಮೈಸೂರು ದಸರಾ ಅಂಬಾರಿ ಆನೆಯಾಗಿದ್ದ ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಸಂಸದ ಯದುವೀರ್ ಹಾಗೂ ಶಾಸಕ ತನ್ವೀರ್ ಸೇಠ್ ಸಭೆ ನಡೆಸಿದರು.
Published on: 

ಮೈಸೂರು: ಮೈಸೂರು ದಸರಾ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದ ಅರ್ಜುನ ಆನೆಯ ಸ್ಮರಣಾರ್ಥ ಎಲ್‌ಐಸಿ ವೃತ್ತದಲ್ಲಿ (ಅರ್ಜುನ ವೃತ್ತ) ನಿರ್ಮಿಸಲು ಉದ್ದೇಶಿಸಿರುವ ಸ್ಮಾರಕ ಯೋಜನೆಗೆ ವೇಗ ನೀಡಲು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಭೆ ನಡೆಸಿದರು.

ಸಭೆಯಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್, ನಗರ ಪಾಲಿಕೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪ್ರಸ್ತಾವಿತ ಸ್ಮಾರಕದ ಸಮಗ್ರ ವಿವರ ಯೋಜನಾ ವರದಿ (ಡಿಪಿಆರ್) ಕುರಿತು ಸವಿಸ್ತಾರ ಚರ್ಚೆ ನಡೆಯಿತು.

ಸ್ಮಾರಕದ ವಿನ್ಯಾಸ, ಯೋಜನೆಯ ರೂಪುರೇಷೆ, ಅನುಷ್ಠಾನದ ಕಾರ್ಯತಂತ್ರ ಹಾಗೂ ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಯೋಜನೆ ಜಾರಿಗೆ ಅಗತ್ಯವಿರುವ ಆಡಳಿತಾತ್ಮಕ ಮತ್ತು ತಾಂತ್ರಿಕ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಬಗ್ಗೆಯೂ ಚರ್ಚಿಸಲಾಯಿತು.

ಈ ಸಂದರ್ಭ ಮಾತನಾಡಿದ ಸಂಸದ ಯದುವೀರ್, ಅರ್ಜುನ ಕೇವಲ ದಸರಾ ಆನೆಯಾಗಿರಲಿಲ್ಲ. ಮೈಸೂರಿನ ಸಾಂಸ್ಕೃತಿಕ ಗುರುತು ಹಾಗೂ ದಸರಾ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದ. ಮೈಸೂರಿನ ಜನರೊಂದಿಗೆ ಆ ಆನೆ ಹೊಂದಿದ್ದ ಭಾವನಾತ್ಮಕ ಸಂಬಂಧ ಮತ್ತು ನಾಡಿನ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯವಾದುದು. ಅರ್ಜುನನ ಸ್ಮರಣೆಯನ್ನು ಶಾಶ್ವತವಾಗಿಸುವ ಉದ್ದೇಶದಿಂದ ಸ್ಮಾರಕ ನಿರ್ಮಾಣಕ್ಕೆ ಬದ್ಧರಾಗಿದ್ದು, ಮುಂದಿನ ಪೀಳಿಗೆಗೂ ಅರ್ಜುನನ ನೆನಪು ಜೀವಂತವಾಗಿರಬೇಕು ಎಂದರು.

ಸ್ಮಾರಕವು ಅರ್ಜುನನ ನೆನಪಿಗೆ ತಕ್ಕಂತೆ ರೂಪುಗೊಳ್ಳುವುದರ ಜತೆಗೆ ಮೈಸೂರಿನ ಪರಂಪರೆ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಮತ್ತೊಂದು ಆಕರ್ಷಣೆಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ಸಂಸದ ಯದುವೀರ್ ಸೂಚಿಸಿದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ಅರ್ಜುನ ಮೈಸೂರಿನ ಜನರ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿದ್ದಾನೆ. ದಸರಾ ಆಚರಣೆ ಹಾಗೂ ಸಾಂಸ್ಕೃತಿಕ ಪರಂಪರೆಗೆ ಆತನ ಕೊಡುಗೆ ಸ್ಮರಣೀಯ. ಆತನ ಸ್ಮರಣಾರ್ಥ ಸ್ಮಾರಕ ನಿರ್ಮಿಸುವುದು ಸೂಕ್ತ ಗೌರವವಾಗಿದೆ. ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.