

ಮಂಡ್ಯ: ನಗರದಲ್ಲಿ ಹವಾ ನಿಯಂತ್ರಿತ ಹೈಟೆಕ್ ಸುಸಜ್ಜಿತ ಶೌಚಗೃಹ ನಿರ್ಮಾಣಕ್ಕೆ ಬುಧವಾರ ಶಾಸಕ ರವಿಕುಮಾರ್ ಗಣಿಗ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು, ಬೆಂಗಳೂರಿನ ಆಸ್ತ ಫೌಂಡೇಶನ್ ಸಹಭಾಗಿತ್ವದಲ್ಲಿ ಜೆ.ಸಿ.ವೃತ್ತ ಹಾಗೂ ಎಸ್.ಡಿ.ಜಯರಾಂ ವೃತ್ತ (ನಂದಾ ವೃತ್ತ)ಗಳಲ್ಲಿ ಹವಾ ನಿಯಂತ್ರಿತ ಹೈಟೆಕ್ ಸುಸಜ್ಜಿತ 7 ಶೌಚಗೃಹ ಕೊಠಡಿ ಮತ್ತು ಒಂದು ಸ್ನಾನದ ಕೊಠಡಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲಾ ಕಾರಾಗೃಹ ಸಮೀಪ ನಗರಸಭೆ ಅನುದಾನದಲ್ಲಿ 25 ಲಕ್ಷ ರೂ ಅನುದಾನದಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಫೆಬ್ರವರಿ ತಿಂಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬರಲಿವೆ. ಇನ್ನುಳಿದಂತೆ ಮಂಡ್ಯ ನಗರದ ಹೊಸಹಳ್ಳಿ ವೃತ್ತ, ಮೈಷುಗರ್ ವೃತ್ತ ಹಾಗೂ ಬಾಲಭವನದ ಬಳಿ ಶೌಚಗೃಹದ ಅವಶ್ಯಕತೆ ಇದೆ ಎಂದು ಸಾರ್ವಜನಿಕರು ಕೇಳಿದ್ದಾರೆ. ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುವುದು. ಚುನಾವಣೆ ಸಂದರ್ಭದಲ್ಲಿ ಮಂಡ್ಯ ನಗರವನ್ನು ಹೊಸ ಮಂಡ್ಯವನ್ನಾಗಿ ರೂಪಿಸಲಾಗುವುದು ಎಂದು ಭರವಸೆ ನೀಡಿದ್ದೆ. ಕೊಟ್ಟ ಮಾತಿನಂತೆ ನಗರದ ಅಭಿವೃದ್ಧಿಗೆ ಹಂತ ಹಂತವಾಗಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರಸಭಾ ಸದಸ್ಯರಾದ ಶ್ರೀಧರ್, ನಯೀಂ, ರಾಮಲಿಂಗೇಗೌಡ, ಪೂರ್ಣಿಮಾ, ಮನ್‌ಮುಲ್ ನಿರ್ದೇಶಕ ಯು.ಸಿ. ಶಿವಕುಮಾರ್ (ಶಿವಪ್ಪ), ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ರುದ್ರಪ್ಪ ಇತರರಿದ್ದರು.