ಸ್ವಾಗತ ಕಮಾನು ನಿರ್ಮಾಣ; ಗುಂಪುಗಳ ನಡುವೆ ವಾಗ್ವಾದ

30-11-Shiva-5
ರಾಯಚೂರಿನ ಕಾಟೇ ದರ್ವಾಜಾದಲ್ಲಿ ಅನಕೃತವಾಗಿ ಸ್ವಾಗತ ಕಮಾನು ನಿರ್ಮಾಣ ಮಾಡುತ್ತಿರುವ ಬಗ್ಗೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ನೇತೃತ್ವದ ಬಿಜೆಪಿ ನಿಯೋಗ ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ಜತೆ ಗುರುವಾರ ಚರ್ಚಿಸಿದರು. ಮಾಜಿ ಶಾಸಕ ಎ.ಪಾಪಾರೆಡ್ಡಿ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಡಿವೈಎಸ್ಪಿ ಸತ್ಯನಾರಾಯಣ, ಮುಖಂಡರಾದ ಬಿ.ಗೋವಿಂದ, ಆಂಜಿನೇಯ ಕಡಗೋಲ, ರಾಜಕುಮಾರ, ಈ.ಶಶಿರಾಜ, ಶಿವಬಸಪ್ಪ ಮಾಲಿಪಾಟೀಲ್, ಯು.ನರಸರೆಡ್ಡಿ, ಬಂಡೇಶ ವಲ್ಕಂದಿನ್ನಿ ಇದ್ದರು.
Published on

ರಾಯಚೂರು: ನಗರದ ಕಾಟೇ ದರ್ವಾಜ ಬಳಿ ಮುಸ್ಲಿಂ ಸಮಾಜದಿಂದ ಸ್ವಾಗತ ಕಮಾನು ನಿರ್ಮಾಣಕ್ಕೆ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರಿಂದ ಗುರುವಾರ ಎರಡು ಗುಂಪುಗಳ ನಡುವೆ ವಾಗ್ವಾದ ಜರುಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಕೋಟೆಗೆ ಹೊಂದಿಕೊಂಡು ಹಜರತ್ ಅಲ್ಲಾವುದ್ದೀನ್ ಬಾಬಾ ದರ್ಗಾಗೆ ಸ್ವಾಗತ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ನಗರ ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ಎ.ಪಾಪಾರೆಡ್ಡಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕೋಟೆಗೆ ಹೊಂದಿಕೊಂಡಿರುವ ರಸ್ತೆಯನ್ನು ಅತಿಕ್ರಮಣ ಮಾಡಲು ಸ್ವಾಗತ ಕಮಾನು ನಿರ್ಮಾಣ ಮಾಡಲಾಗುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದರಿಂದ ಸ್ಥಳದಲ್ಲಿದ್ದ ಮುಸ್ಲಿಂ ಸಮಾಜದ ಯುವಕರು ಕೂಡಾ ಘೋಷಣೆ ಕೂಗಿದ್ದರಿಂದ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಸ್ಥಳದಲ್ಲಿದ್ದ ಪೊಲೀಸರು ಎಲ್ಲರನ್ನು ಸಮಾಧಾನಿಸಿ ಕಳುಹಿಸಿದರು.
ನಂತರ ಬಿಜೆಪಿ ನಾಯಕರ ತಂಡ ನಗರಸಭೆಗೆ ಆಗಮಿಸಿ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠಗೆ ಅನಕೃತವಾಗಿ ನಿರ್ಮಾಣ ಮಾಡುತ್ತಿರುವ ಸ್ವಾಗತ ಕಮಾನು ಕಾಮಗಾರಿ ತಡೆಯುವಂತೆ ಒತ್ತಾಯಿಸಿದರು. ಡಾ.ಶಿವರಾಜ ಪಾಟೀಲ್ ಮಾತನಾಡಿ, ಹಲವು ವರ್ಷಗಳಿಂದ ಕಾಟೇ ದರ್ವಾಜಾ ರಸ್ತೆಗಳ ವಾಹನ ಸಂಚಾರ ನಡೆಯುತ್ತಿತ್ತು. ಈಗ ರಸ್ತೆ ಬಂದ್ ಮಾಡಿ ಕಾಮಗಾರಿ ನಡೆಸಲಾಗುತ್ತಿದೆ.
ಅನಕೃತವಾಗಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ಈಗಾಗಲೇ ಪ್ರಾಚ್ಯ ವಸ್ತು ಇಲಾಖೆಗೆ ದೂರು ನೀಡಲಾಗಿದ್ದು, ನಗರಸಭೆಗೆ ನೋಟಿಸ್ ಕೂಡಾ ನೀಡಲಾಗಿದೆ. ತಕ್ಷಣ ಕಾಮಗಾರಿ ನಿಲ್ಲಿಸಿ, ಕೋಟೆ ಸ್ಥಳವನ್ನು ಮೊದಲಿನಂತೆ ಕಾಣುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ, ನಗರದಲ್ಲಿ ಜನರು ಸಹಬಾಳ್ವೆಯಿಂದ ಬಾಳುತ್ತಿದ್ದು, ಅದನ್ನು ಕೆಡಿಸುವ ಕೆಲಸ ಮಾಡಬಾರದು. ಕಾಟೇ ದರ್ವಾಜಾ ಅತಿಕ್ರಮಣಕ್ಕೆ ಅವಕಾಶ ನೀಡಿದರೆ ಎರಡು ಕೋಮುಗಳ ನಡುವೆ ದ್ವೇಷಕ್ಕೆ ಕಾರಣವಾಗಲಿದೆ. ಕಾರಣ ಅದನ್ನು ತಡೆಯಬೇಕು ಎಂದರು.
ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ಮಾತನಾಡಿ, ತಕ್ಷಣದಿಂದ ಕಾಮಗಾರಿ ನಿಲ್ಲಿಸಲು ಕ್ರಮಕೈಗೊಳ್ಳಲಾಗಿದೆ. ಹಿಂದೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಸ್ವಾಗತ ಕಮಾನು ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ವಾಸ್ತವ ಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡು ಮುಂದಿನ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಡಿವೈಎಸ್ಪಿ ಸತ್ಯನಾರಾಯಣ, ಮುಖಂಡರಾದ ಬಿ.ಗೋವಿಂದ, ಆಂಜಿನೇಯ ಕಡಗೋಲ, ರಾಜಕುಮಾರ, ಈ.ಶಶಿರಾಜ, ಶಿವಬಸಪ್ಪ ಮಾಲಿಪಾಟೀಲ್, ಯು.ನರಸರೆಡ್ಡಿ, ಬಂಡೇಶ ವಲ್ಕಂದಿನ್ನಿ, ವಿಜಯರಾಜೇಶ್ವರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net