ಸರ್ಕಾರಿ ಶಾಲೆ ವೇದಿಕೆಗೆ ಛಾವಣಿ ನಿರ್ಮಾಣ

17 lxr 3
Published on

ಲಕ್ಷ್ಮೇಶ್ವರ: ತಾಲೂಕಿನ ಅಡರಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಗಳಿಬ್ಬರು ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ವೇದಿಕೆಗೆ ಸುಸಜ್ಜಿತ ಮೇಲ್ಛಾವಣಿ ನಿರ್ಮಾಣ ಮಾಡಿಕೊಟ್ಟು ಗಮನ ಸೆಳೆದಿದ್ದಾರೆ.

ಶಾಲೆಯ ಶಿಕ್ಷಕಿ ಪಿ.ಬಿ. ಗುರುಮಠ ಅವರ ಸಹೋದರರಾದ ಅಮೆರಿಕದ ಸ್ಯಾನ್‌ಪ್ರಾನ್ಸಿಸ್ಕೋದಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಪ್ರದೀಪ ಗುರುಮಠ ಹಾಗೂ ದುಬೈನಲ್ಲಿ ನರರೋಗ ತಜ್ಞರಾಗಿರುವ ಡಾ. ವಿನಯ್ ಗುರುಮಠ ಅವರು ಈ ಛಾವಣಿ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ತಮ್ಮ ತಾಯಿ ದಿ.ಪುಷ್ಪಾವತಿ ಗುರುಮಠ ಅವರ ಸ್ಮರಣಾರ್ಥ ಅಡರಕಟ್ಟಿ ಶಾಲೆಗೆ ಈ ಕೊಡುಗೆ ನೀಡಲಾಗಿದೆ. ದಾನಿಗಳ ಆರ್ಥಿಕ ನೆರವಿನಿಂದ ಶಾಲೆಯಲ್ಲಿ ಸುಸಜ್ಜಿತ ವೇದಿಕೆಯೊಂದು ನಿರ್ಮಾಣವಾದಂತಾಗಿದೆ.

ಛಾವಣಿ ವೀಕ್ಷಿಸಿ ಮಾತನಾಡಿದ ತಾಪಂ ಇಒ ಕೃಷ್ಣಪ್ಪ ಧರ್ಮರ, ಸರ್ಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸಲು ದಾನಿಗಳು, ಶಿಕ್ಷಣ ಪ್ರೇಮಿಗಳು, ಸಾರ್ವಜನಿಕರು ಮುಂದಾಗಬೇಕು. ಆಗ ಸರ್ಕಾರಿ ಶಾಲೆ ಎಲ್ಲರ ಮೆಚ್ಚಿನ ಶಿಕ್ಷಣ ಕೇಂದ್ರ ಆಗುತ್ತದೆ. ಗ್ರಾಮಸ್ಥರು ಹಾಗೂ ಶಿಕ್ಷಕರ ಸಹಕಾರದಿಂದ ಶಾಲಾ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದಿಸೆಯಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದರು.

ಮುಖ್ಯಶಿಕ್ಷಕಿ ಎಸ್.ಎಚ್. ಉಮಚಗಿ, ಎಸ್‌ಡಿಎಂಸಿ ಸದಸ್ಯ ಕುಮಾರಣ್ಣ ಚಕ್ರಸಾಲಿ, ಶಿಕ್ಷಕರಾದ ಪಿ.ಸಿ. ಕಾಳಶೆಟ್ಟಿ, ಡಿ.ಡಿ. ಲಮಾಣಿ, ಎಸ್.ಕೆ. ಅಮ್ಮಿನಬಾವಿ, ಪಿ.ಬಿ. ಗುರುಮಠ, ಎಸ್.ಸಿ. ಹಿರೇಮಠ, ಕೆ.ಎಂ. ಕೊಟ್ರಮ್ಮ, ಎಂ.ವೈ. ನೀಲನಾಯ್ಕರ, ಎಸ್.ಎಂ. ಕೌಜಗೇರಿ ಮತ್ತು ಕಿರಣಕುಮಾರ ಕಲಿವಾಳ ಹಾಗೂ ಎಸ್‌ಡಿಎಂಸಿ ಸದಸ್ಯರು ದಾನಿಗಳ ಸೇವೆಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net