ಅಂತಾರಾಜ್ಯ ಹೆದ್ದಾರಿಯಲ್ಲಿ ಗುಂಡಿ ನಿರ್ಮಾಣ

ಒಡೆಯರಪಾಳ್ಯ ಗ್ರಾಮದ ಮುಖ್ಯ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ಕೆಸರು ಮಯವಾಗಿರುವುದು.
ಒಡೆಯರಪಾಳ್ಯ ಗ್ರಾಮದ ಮುಖ್ಯ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ಕೆಸರು ಮಯವಾಗಿರುವುದು.
Published on

ಹನೂರು: ತಾಲೂಕಿನ ಒಡೆಯರಪಾಳ್ಯ ಬಸ್ ನಿಲ್ದಾಣ ಮುಂಭಾಗದ ಮುಖ್ಯ ರಸ್ತೆ ಹದಗೆಟ್ಟಿರುವ ಕಾರಣ ಇಲ್ಲಿ ಸಂಚರಿಸಲು ಅವಸ್ಥೆ ಪಡುವಂತಾಗಿದೆ.

ಗ್ರಾಮದ ಮುಖ್ಯ ರಸ್ತೆಯು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಹೆದ್ದಾರಿಯಾಗಿದೆ. ಹಾಗಾಗಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಹಾಗೆಯೇ ಒಡೆಯರಪಾಳ್ಯ ಸೇರಿದಂತೆ ಹುತ್ತೂರು, ಬಿ.ಜಿ ದೊಡ್ಡಿ, ವಿ.ಎಸ್.ದೊಡ್ಡಿ, ಬೈಲೂರು, ಗುಂಡಿಮಾಳ, ಕತ್ತೇಕಲ್ ಪೋಡು, ಹಿರಿಯಂಬಲ ಸೇರಿದಂತೆ ಇತರ ಗ್ರಾಮಗಳ ಜನರು ಕೆಲಸದ ನಿಮಿತ್ತ ಲೊಕ್ಕನಹಳ್ಳಿ, ಹನೂರು, ಕೊಳ್ಳೇಗಾಲ, ತಮಿಳುನಾಡು ಹಾಗೂ ಇತರ ಕಡೆಗಳಿಗೆ ತೆರಳಲು ಒಡೆಯರಪಾಳ್ಯಕ್ಕೆ ಆಗಮಿಸುತ್ತಾರೆ. ಆದರೆ ಬಸ್ ನಿಲ್ದಾಣದ ಮುಂಭಾಗದ ಮುಖ್ಯ ರಸ್ತೆಯ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಸಂಪೂರ್ಣ ಹದಗೆಟ್ಟಿದೆ. ಇದರಿಂದ ಸಂಚರಿಸಲು ತೊಂದರೆ ಎದುರಾಗಿದೆ. ಇತ್ತ ಗ್ರಾಮದಲ್ಲಿ ಬಸ್ ನಿಲ್ದಾಣ ಇಲ್ಲದ ಕಾರಣ ಜನರು ರಸ್ತೆ ಬದಿಯಲ್ಲೇ ನಿಲ್ಲುವಂತಾಗಿದೆ.

ಇದೀಗ ಗ್ರಾಮದಲ್ಲಿ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ಹದಗೆಟ್ಟ ರಸ್ತೆಯ ಗುಂಡಿಗಳಲ್ಲಿ ನೀರು ನಿಂತಿರುವುದು ಒಂದೆಡೆಯಾದರೆ, ವಾಹನ ಸಂಚಾರದಿಂದ ಕೆಸರು ಮಯವಾಗುತ್ತಿರುವುದು ಮತ್ತೊಂದೆಡೆ. ಇದರಿಂದ ಪಾದಚಾರಿಗಳು ಅದರಲ್ಲೂ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಸಂಚರಿಸಲು ತೊಂದರೆಪಡಬೇಕಿದೆ. ಇನ್ನು ಬೈಕ್ ಸವಾರರ ಸ್ಥಿತಿ ಹೇಳತೀರದು. ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಮಳೆ ಬಂದ ಸಂದರ್ಭ ಅವ್ಯವಸ್ಥೆ ತಾಂಡವವಾಡುತ್ತದೆ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ರಸ್ತೆಯನ್ನು ಅಭಿವೃದ್ಧಿ ಪಡಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಗ್ರಾಮದ ರೇಚಣ್ಣ ಒತ್ತಾಯಿಸಿದ್ದಾರೆ.

ಒಡೆಯರಪಾಳ್ಯದಲ್ಲಿ ರಸ್ತೆ ಹದಗೆಟ್ಟಿರುವುದು ಗಮನಕ್ಕೆ ಬಂದಿದೆ. ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಬಳಿಕ ಆದ್ಯತೆ ಮೇರೆಗೆ ಒಡೆಯರಪಾಳ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲು ಅಗತ್ಯ ಕ್ರಮವಹಿಸಲಾಗುವುದು.

ಪುರುಷೋತ್ತಮ್ ಎಇಇ, ಪಿಡಬ್ಲ್ಯುಡಿ ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net