ಚರ್ಚ್‌ನಿಂದ ಪ್ರಯಾಣಿಕರ ತಂಗುದಾಣ ನಿರ್ಮಾಣ

MDG mla
ಕಸ್ಕೆಬೈಲ್ ಗ್ರಾಮದಲ್ಲಿ ಪ್ರಯಾಣಿಕರ ತಂಗುದಾಣವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು. ಜಿ.ಎಸ್.ದಿನೇಶ್, ಹೊಸಕೆರೆ ರಮೇಶ್, ಪೀಟರ್ ಬ್ರಾಂಕ್, ದೀಪಕ್ ಲೋಬೊ, ಎ.ಜಿ.ಸುಬ್ರಾಯ ಗೌಡ ಇತರರಿದ್ದರು.
Published on

ಮೂಡಿಗೆರೆ: ಪ್ರಯಾಣಿಕರ ತಂಗುದಾಣವನ್ನು ಚರ್ಚ್ ಆಡಳಿತ ಸಮಿತಿಯಿಂದ ನಿರ್ಮಿಸಿ ಸರ್ಕಾರಕ್ಕೆ ಆರ್ಥಿಕ ಹೊರೆ ತಪ್ಪಿಸಿ ಜನಸಾಮಾನ್ಯರ ಸೇವೆ ಮಾಡುತ್ತಿರುವುದು ಮಾದರಿ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಕಸ್ಕೇಬೈಲ್ ಗ್ರಾಮದಲ್ಲಿ ಸೈಂಟ್ ಪೀಟರ್ ಚರ್ಚ್ ಆಡಳಿತ ಸಮಿತಿಯಿಂದ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣ ಉದ್ಘಾಟಿಸಿ ಮಾತನಾಡಿ, ಚರ್ಚ್‌ಹಾಲ್‌ನಲ್ಲಿ 6 ತಿಂಗಳ ಹಿಂದೆ ಜಿಲ್ಲಾಡಳಿತದಿಂದ ಜನಸ್ಪಂದನ ಕಾರ್ಯಕ್ರಮ ನಡೆದಿತ್ತು. ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಲಾಗಿದೆ. ಜನರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.
ಕುಡಿಯುವ ನೀರಿನ ಸಮಸ್ಯೆಗೆ ಗೋಣಿಬೀಡು ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಜೆಜೆಎಂ ಯೋಜನೆಯಿಂದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಕೆಲ ಗ್ರಾಮಗಳಲ್ಲಿ ಸದ್ಯದಲ್ಲೇ ಜೆಜೆಎಂ ಕಾಮಗಾರಿ ನಡೆಯಲಿದೆ. ಗೋಣಿಬೀಡು ಭಾಗದಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಜನರಿಂದ ದೂರುಗಳು ಬರುತ್ತಿವೆ. ಜನ್ನಾಪುರದಲ್ಲಿ ವಿದ್ಯುತ್ ಪ್ರಸರಣಾ ಉಪಕೇಂದ್ರ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. ಉಪಕೇಂದ್ರ ಸ್ಥಾಪನೆಯಾದ ಬಳಿಕ ವಿದ್ಯುತ್ ಸಮಸ್ಯೆಗೆ ಮುಕ್ತಿ ದೊರಕಲಿದೆ. ರಸ್ತೆಗಳ ಅಭಿವೃದ್ಧಿಗೆ ಅನುದಾನದ ಕೊರತೆಯಿಲ್ಲ. ಎಲ್ಲ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗೋಣಿಬೀಡು ಗ್ರಾಪಂ ಅಧ್ಯಕ್ಷ ಜಿ.ಎಸ್.ದಿನೇಶ್ ಮಾತನಾಡಿ, ಗ್ರಾಪಂಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಬಹುತೇಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಶೌಚಗೃಹ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಶೌಚಗೃಹಕ್ಕೆ ಜನರಿಂದ ಹೊಸದಾಗಿ ಹೆಚ್ಚಿನ ಬೇಡಿಕೆ ಬಂದಿಲ್ಲ. ಗ್ರಾಮಗಳ ಸ್ವಚ್ಛತೆಗಾಗಿ 2 ವಾಹನಗಳನ್ನು ಬಳಸಲಾಗುತ್ತಿದೆ. ಗ್ರಾಪಂನೊಂದಿಗೆ ಚರ್ಚ್ ಆಡಳಿತ, ಜೆಸಿಐ, ರೋಟರಿ ಸೇರಿದಂತೆ ಸಂಘ-ಸಂಸ್ಥೆಗಳು ಕೈಜೋಡಿಸುತ್ತಿರುವ ಕಾರಣ ಜನರ ಬೇಡಿಕೆ ತುರ್ತಾಗಿ ಈಡೇರುತ್ತಿದೆ ಎಂದು ತಿಳಿಸಿದರು.
ಸೈಂಟ್ ಪೀಟರ್ ಚರ್ಚ್ ಧರ್ಮಗುರು ಫಾದರ್ ಪೀಟರ್ ಬ್ರಾಂಕ್, ಕಾರ್ಯದರ್ಶಿ ದೀಪಕ್ ಲೋಬೋ, ಖಜಾಂಚಿ ಫೆಲಿಕ್ಸ್ ಸಾಲ್ಡಾನಾ, ಪಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್, ಗ್ರಾಪಂ ಸದಸ್ಯರಾದ ರಾಧಾ ಮಿತ್ರೇಶ್, ಭಾರತಿ, ಸುಜಾತಾ, ರೇಣುಕಾ, ರೆಬೆಲ್ಲೊ, ತಾಪಂ ಮಾಜಿ ಅಧ್ಯಕ್ಷ ಎ.ಜಿ.ಸುಬ್ರಾಯ ಗೌಡ, ತಾಲೂಕು ಕೆಡಿಪಿ ಸದಸ್ಯ ಉಗ್ಗೆಹಳ್ಳಿ ಸುರೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net