ಕೆಲವರಿಂದ ಬಸವತತ್ವ-ಪಂಚಪೀಠಗಳ ನಡುವೆ ಕಂದಕ ನಿರ್ಮಾಣ

25 GJD 3
Published on

ಗಜೇಂದ್ರಗಡ: ಬಸವತತ್ವ ಹಾಗೂ ಪಂಚಪೀಠ ಪರಂಪರೆಗಳ ನಡುವೆ ಕೆಲವೇ ಕೆಲವು ಜನರು ಕಂದಕ ನಿರ್ಮಾಣ ಮಾಡುವಂಥ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇತಿಹಾಸ ಗೊತ್ತಿಲ್ಲ ಎಂದು ಶ್ರೀಶೈಲಂ ಸೂರ್ಯ ಸಿಂಹಾಸನಾಪೀಠದ 1008 ಜಗದ್ಗುರು ಡಾ.ಚನ್ನಸಿದ್ಧರಾಮ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಪಟ್ಟಣದ ಎಪಿಎಂಸಿ ಎದುರಿನ ಬಯಲು ಜಾಗದಲ್ಲಿ ನಡೆಯುತ್ತಿರುವ ಬಸವ ಪುರಾಣದ 29ನೇ ದಿನದ ಸೋಮವಾರ ನಡೆದ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಶ್ರೀಶೈಲ ಪೀಠಕ್ಕೆ, ಬಸವಣ್ಣನವರು ಮಾಡಿದ ಕ್ರಾಂತಿಗೆ ಹಾಗೂ ಬಸವಣ್ಣನವರು ಕಲ್ಯಾಣದಲ್ಲಿ ನಡೆಸುತ್ತಿದ್ದ ಕ್ರಾಂತಿ ಸಂದರ್ಭದಲ್ಲಿ ಒಂದಕ್ಕೊಂದು ಪೂರಕವಾದಂತಹ ಸಂಗತಿಗಳನ್ನು ಗಮನಿಸಬಹುದು. ಬಸವಣ್ಣನವರು ಜಾತಿಯ ಮೌಢ್ಯ ಕಿತ್ತೆಸೆದು ಸಮಾಜವನ್ನು ಒಂದುಗೂಡಿಸಿ ಸಮಾನತೆ ತರಬೇಕೆಂದು ಪ್ರಯತ್ನಿಸಿದಾಗ ಜಾತಿ ವ್ಯವಸ್ಥೆಗಳ ಕೆಂಗಣ್ಣು ಅವರ ಮೇಲೆ ಬಿಳುತ್ತದೆ. ಆಗಿನ ಘಟನೆಗಳನ್ನು ನಾವೆಲ್ಲ ಕಣ್ತೆರೆದು ಗಮನಿಸಬೇಕಿದೆ’ ಎಂದರು.

ಬಸವಣ್ಣನವರು ಕಲ್ಯಾಣದಲ್ಲಿ ಎಲ್ಲರನ್ನೂ ಒಂದೆಡೆ ಸೇರಿಸಿ ಧರ್ಮ, ಸಮಾಜಗಳ ಬಗ್ಗೆ ಚಿಂತನೆ ಮಾಡಿ ಹೊಸ ಸಮಾಜ ಕಟ್ಟಬೇಕೆಂದು ಪ್ರಯತ್ನ ಮಾಡುತ್ತಿದ್ದ ಸಂದರ್ಭದಲ್ಲಿ ಶ್ರೀಶೈಲ ಪೀಠದ ಅಂದಿನ ಮಲ್ಲಿಕಾರ್ಜುನ ಪಂಡಿತಾರಾಧ್ಯ ಭಗವತ್ಪಾದರಿಗೆ ‘ನೀವು ಬರಬೇಕು’ ಎಂದು ಬಸವಣ್ಣನವರೇ ಆಮಂತ್ರಣ ನೀಡಿದ್ದರು. ಕಾಲಾಂತರದಲ್ಲಿ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಕಲ್ಯಾಣಕ್ಕೆ ಬರಲು ಆರಂಭಿಸುತ್ತಾರೆ. ಆ ಸಂದರ್ಭದಲ್ಲಿ ಕಲ್ಯಾಣದಲ್ಲಿ ಕ್ರಾಂತಿ ಆರಂಭವಾಗುತ್ತದೆ. ಬಸವಣ್ಣನವರನ್ನು ಕಲ್ಯಾಣದಿಂದ ಗಡಿಪಾರು ಮಾಡುವ ಸಂದರ್ಭ ಸೃಷ್ಟಿಯಾಗುತ್ತದೆ. ನಾನು ಕಲ್ಯಾಣ ತೊರೆಯುತ್ತಿರುವಾಗ ಶ್ರೀಶೈಲ ಜಗದ್ಗುರುಗಳು ಇಲ್ಲಿಗೆ ಬಂದು ಅನಾಹುತ ಸೃಷ್ಟಿಯಾಗುವುದು ಬೇಡವೆಂದು ತಮ್ಮ ಇಬ್ಬರು ಆಪ್ತರ ಮೂಲಕ ಹೈದರಾಬಾದ್ ಆಚೆಗಿನ ಪಟ್ಟಣಚೇರಿಯಲ್ಲಿದ್ದ ಜಗದ್ಗುರುಗಳಿಗೆ ಇಲ್ಲಿನ ಘಟನೆ ವಿವರಿಸಿ ತಮ್ಮ ಕ್ಷೇತ್ರಕ್ಕೆ ಮರಳುವಂತೆ ವಿನಂತಿಸಿ, ಭಸ್ಮ ನೀಡಲು ಹೇಳಿರುತ್ತಾರೆ. ಕಲ್ಯಾಣದಲ್ಲಿ ನಡೆದಿರುವ ಎಲ್ಲ ಘಟನೆ ತಿಳಿದು ಅಲ್ಲಿಯೇ ಉಳಿದ ಜಗದ್ಗುರುಗಳು ಕಣ್ಣೀರು ಹಾಕಿ, ಅಳಲು ಗೀತೆ ಬರೆದಿದ್ದಾರೆ. ಇದರಿಂದ ಶ್ರೀಶೈಲ ಪೀಠದ ಜಗದ್ಗುರುಗಳಿಗೆ ಹಾಗೂ ಬಸವ ಪರಂಪರೆಗಿರುವ ಅವಿನಾಭಾವ ಸಂಬಂಧ ತಿಳಿಯುತ್ತದೆ ಎಂದು ವಿವರಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ನಮ್ಮ ಸಂಸೃ್ಕ-ಪರಂಪರೆ ಉಳಿಯಲು ಶ್ರೀಮಠಗಳ ಕೊಡುಗೆ ಅಪಾರವಾಗಿದೆ. ಎಲ್ಲಿ ಧರ್ಮ ಇದೆಯೋ ಅಲ್ಲಿ ಶಾಂತಿ, ಸಂತೋಷ, ನೆಮ್ಮದಿ, ಪ್ರಗತಿ ಇರುತ್ತದೆ. ಸುಂದರ ಸಮಾಜ ನಿರ್ವಿುಸುವ ನಿಟ್ಟಿನಲ್ಲಿ ಗಜೇಂದ್ರಗಡದಲ್ಲಿ ಶ್ರೀಗಳು ಬಸವ ಪುರಾಣ ಪ್ರಾರಂಭಿಸಿದ್ದಾರೆ. ಬಸವಾದಿ ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬಸವ ಪುರಾಣದ ಸಾರ್ಥಕತೆ ಸಿಗುತ್ತದೆ ಎಂದರು.

ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಯಲಬುರ್ಗಾ ಶ್ರೀಧರಮುರಡಿ ಹಿರೇಮಠದ ಬಸವಲಿಂಗ ಸ್ವಾಮೀಜಿ, ಎ.ಪಿ. ಪಾಟೀಲ ದೇವರು ಸೇರಿದಂತೆ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು. ಶಾಸಕ ಜಿ.ಎಸ್.ಪಾಟೀಲ, ಸಿದ್ದಣ್ಣ ಬಂಡಿ, ಅಮರೇಶ ಗಾಣಿಗೇರ, ಪ್ರಭು ಚವಡಿ, ಶರಣಪ್ಪ ಬೆಟಗೇರಿ, ಅಪ್ಪು ಮತ್ತಿಕಟ್ಟಿ, ಶಿವಕುಮಾರ ಕೋರಧಾನ್ಯಮಠ, ಅಮರೇಶ ಗೌರಿಮಠ, ಆನಂದ ಸಜ್ಜನರ, ಮಹೇಶ ಪಲ್ಲೇದ ಇತರರು ಇದ್ದರು.

ಬಸವಣ್ಣನವರಿಗೆ ಹಾಗೂ ಪಂಚಪೀಠಗಳಿಗೆ ಎಣ್ಣೆ-ಶೀಗೆಕಾಯಿ ಇದ್ದಂತೆ, ಒಬ್ಬರಿಗೊಬ್ಬರು ಸೇರುವುದಿಲ್ಲ. ಬಸವತತ್ವ ಪಂಚಪೀಠಕ್ಕೆ ಆಗುವುದಿಲ್ಲ. ಬಸವ ಪರಂಪರೆಗೆ ಪಂಚಪೀಠಗಳೆಂದರೆ ಆಗುವುದಿಲ್ಲ ಎಂದು ಕೆಲವರು ತಮ್ಮ ಮೂಗಿನ ನೇರಕ್ಕೆ ಮಾತನಾಡಿಕೊಳ್ಳುತ್ತಾರೆ. ಆದರೆ, ಬಸವಣ್ಣನವರಿಗೂ ಪಂಚಪೀಠಗಳು ಬೇಕು. ಪಂಚಪೀಠಗಳಿಗೂ ಬಸವಣ್ಣನವರು ಬೇಕು ಎಂಬುದಕ್ಕೆ ಗಜೇಂದ್ರಗಡದಲ್ಲಿ ನಡೆಯುತ್ತಿರುವ ಬಸವ ಪುರಾಣಕ್ಕೆ ಶ್ರೀಶೈಲ ಜಗದ್ಗರುಗಳು ಬಂದಿರುವುದೇ ಪ್ರತ್ಯಕ್ಷ ಸಾಕ್ಷಿಯಾಗಿದೆ. | ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಶಿವಾಚಾರ್ಯರ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net