ಹೆದ್ದಾರಿಯಲ್ಲಿ ಅಪಾಯಕಾರಿ ಹೊಂಡ ನಿರ್ಮಾಣ!

bridge
ಕುಂದಾಪುರ-ಬೈಂದೂರು ನಡುವಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ತಲ್ಲೂರು ರಾಜಾಡಿ ಸೇತುವೆ ಸಮೀಪ ಭಾರಿ ಕುಸಿತ ಕಂಡು ಬಂದಿದೆ.
Published on

ಕುಂದಾಪುರ: ಕುಂದಾಪುರ-ಬೈಂದೂರು ನಡುವಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ತಲ್ಲೂರು ರಾಜಾಡಿ ಸೇತುವೆ ಸಮೀಪ ಭಾರಿ ಕುಸಿತ ಕಂಡು ಬಂದಿದ್ದು, ಅಪಾಯಕಾರಿ ಹೊಂಡ ನಿರ್ಮಾಣವಾಗಿದೆ. ಕುಂದಾಪುರದಿಂದ ಬೈಂದೂರಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಾಜಾಡಿ ಸೇತುವೆ ಸಮೀಪ ಕುಸಿತ ಕಂಡು ಬಂದಿದ್ದು, ರಸ್ತೆ ಜಾರುತ್ತಿದ್ದು ಕಂದಕ ಸೃಷ್ಟಿಯಾಗಿದೆ. ಕುಸಿತ ಕಂಡ ಪ್ರದೇಶದ ಸನಿಹದಲ್ಲಿ ಹೊಂಡವೂ ಉದ್ಭವಿಸಿದ್ದು, ಹೊಂಡದ ಸಮೀಪ ಭಾರಿ ಗಾತ್ರದ ಕಲ್ಲನ್ನು ಇಡಲಾಗಿದೆ. ರಾತ್ರಿ ವೇಳೆ ವಾಹನಗಳು ರಸ್ತೆಯ ಬದಿಯಲ್ಲಿ ಸಂಚರಿಸುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಟ್ಟಿರುವ ಕಲ್ಲು ಗಮನಕ್ಕೆ ಬರುವುದಿಲ್ಲ. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ದ್ವಿಚಕ್ರ ಹಾಗೂ ಲಘು ವಾಹನಗಳು ಬಹಳ ಎಚ್ಚರಿಕೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ರಸ್ತೆ ಮತ್ತು ಬದಿಯಲ್ಲಿ ಹಾಕಲಾದ ಮಣ್ಣಿನ ನಡುವೆ ಕುಸಿದು ಕಂದಕ ಸೃಷ್ಟಿಯಾಗಿದೆ. ದಿನದಿಂದ ದಿನಕ್ಕೆ ಕಂದಕ ದೊಡ್ಡದಾಗುತ್ತಾ ಹೋಗುತ್ತಿದೆ. ಇದು ರಸ್ತೆ ಅವಘಡಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಪ್ರಯಾಣಿಕರು ದೂರಿದ್ದಾರೆ. ದುರಸ್ತಿಯಾದ ಕೆಲ ತಿಂಗಳಲ್ಲೇ ಕುಸಿತ: ಕಳೆದ ಕೆಲವು ತಿಂಗಳ ಹಿಂದಷ್ಟೇ ರಾಜಾಡಿ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿ ಇದೇ ಸ್ಥಳದಲ್ಲಿ ಕುಸಿತ ಕಂಡಿತ್ತು. ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಪ್ರಕಟವಾಗುತ್ತಿದ್ದಂತೆಯೇ ಎಚ್ಚರಗೊಂಡ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಐಆರ್‌ಬಿ ಕಂಪೆನಿ ತೇಪೆ ಹಾಕಿದ್ದರು. ರಸ್ತೆ ದುರಸ್ತಿಪಡಿಸಿದ ಕೆಲವೇ ತಿಂಗಳಲ್ಲಿ ಮತ್ತೊಮ್ಮೆ ಕುಸಿದಿದೆ. ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ನಿರ್ಮಿಸಲಾಗಿರುವ ದಂಡೆ ಒಡೆದು ಹೋಗಿದ್ದು, ಹೆದ್ದಾರಿ ಬದಿಯಲ್ಲಿ ಹಾಕಲಾದ ಮಣ್ಣು ಜಾರಿ ತಗ್ಗು ಪ್ರದೇಶಕ್ಕೆ ಇಳಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕುಸಿತಕ್ಕೊಳಗಾಗುತ್ತಿದ್ದರೂ, ಕುಸಿತದಿಂದ ದೊಡ್ಡ ಹೊಂಡ ನಿರ್ಮಾಣವಾಗಿದ್ದರೂ, ಸಂಬಂಧಪಟ್ಟ ಗುತ್ತಿಗೆದಾರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕುಸಿತ ತಡೆಯುವಲ್ಲಿ ಯಾವುದೇ ಕ್ರಮಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ವೈಜ್ಞಾನಿಕ ಕಾಮಗಾರಿಯೇ ರಾಷ್ಟ್ರೀಯ ರಸ್ತೆ ಕುಸಿತಕ್ಕೆ ಕಾರಣ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ಕಾಮಗಾರಿ ಮುಗಿದು ವಾಹನ ಸಂಚಾರಕ್ಕೆ ಬಿಟ್ಟು ಕೊಟ್ಟ ತಿಂಗಳಲ್ಲೇ ತಲ್ಲೂರಿನ ರಾಜಾಡಿ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿ ಕುಸಿದು ರಸ್ತೆಯಲ್ಲಿ ಭಾರೀ ಬಿರುಕು ಬಿಟ್ಟಿತ್ತು. ಇದರಿಂದ ಅನೇಕ ತಿಂಗಳು ಹೊಸ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.

ಕುಂದಾಪುರ-ಬೈಂದೂರು ನಡುವಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ತಲ್ಲೂರು ರಾಜಾಡಿ ಸೇತುವೆ ಸಮೀಪ ಭಾರಿ ಕುಸಿತ ಕಂಡು ಬಂದಿದ್ದು, ಅಪಾಯಕಾರಿ ಹೊಂಡ ನಿರ್ಮಾಣವಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಕುಸಿತ ಕಂಡು ಬಂದಿತ್ತು. ಅವೈಜ್ಞಾನಿಕ ಕಾಮಗಾರಿಯಿಂದ ಇದೇ ರೀತಿ ಅನೇಕ ಕಡೆಗಳಲ್ಲಿ ಕುಸಿತ ಕಂಡು ಬರುತ್ತಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ವಾಹನ ಸವಾರರ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಗಮನಹರಿಸಬೇಕು. ನವೀನ್ ಗಂಗೊಳ್ಳಿ, ವಾಹನ ಸವಾರ. https://www.vijayavani.net/abundant-water-in-kindi-dam https://www.vijayavani.net/cultural-talent-is-the-true-glory-of-kuvempu-kannada

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net