

ಮೂಗೂರು: ಶ್ರೀ ತ್ರಿಪುರ ಸುಂದರಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೂಗೂರಿನಲ್ಲಿ ಸೋಮವಾರ ಶ್ರೀ ತ್ರಿಪುರ ಸುಂದರಮ್ಮ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಮಾಜಿ ಸಚಿವರು ಹಾಗೂ ಸಂಸದರಾದ ಸಿ.ಎಸ್.ಪುಟ್ಟರಾಜು, ಮಾಜಿ ಎಂಎಲ್‌ಸಿ ಮರಿತಿಬ್ಬೇಗೌಡ ಹಾಗೂ ಟ್ರಸ್ಟ್ ಅಧ್ಯಕ್ಷ ಶಿವಲಿಂಗಯ್ಯ ಕಾಮಗಾರಿಗೆ ಚಾಲನೆ ನೀಡಿದರು.
ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಕಬಿನಿ ನಾಲಾ 38ರ ಬಳಿ ಒಂದೂವರೆ ಎಕರೆ ಪ್ರದೇಶದಲ್ಲಿ ಅತ್ಯಂತ ವಿಶಾಲವಾದ ಸುಸಜ್ಜಿತ ಸಮುದಾಯ ಭವನ, ಟ್ರಸ್ಟ್‌ನ ಅತಿಥಿ ಗೃಹ ನಿರ್ಮಾಣಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಟಿ.ನರಸೀಪುರ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಸಚಿವರಾದ ಮಹದೇವಪ್ಪ ಸೇರಿದಂತೆ ಗ್ರಾಮದ ಹಿರಿಯ ಮುಖಂಡರ ಸಹಕಾರದಲ್ಲಿ ಸರ್ಕಾರಿ ನಿಯಮದ ಪ್ರಕಾರ ಜಾಗ ಪಡೆದು ಕಟ್ಟಡ ನಿರ್ಮಾಣಕ್ಕೆ ದೇವಿಯ ಆಶೀರ್ವಾದದಿಂದ ಚಾಲನೆ ನೀಡಲಾಗಿದೆ ಎಂದರು.
ಮರಿತಿಬ್ಬೇಗೌಡರ ಹೆಚ್ಚಿನ ಕಾಳಜಿಯಿಂದ ದೇಗುಲಕ್ಕೆ ರಾಜಗೋಪುರ ನಿರ್ಮಾಣ ಮಾಡಲಾಯಿತು. ಎಚ್‌ಡಿಕೆ ಅವರ ಸರ್ಕಾರದಲ್ಲಿ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಈ ತಾಯಿಗೆ ಸೇವೆ ಸಲ್ಲಿಸಲು ಬಜೆಟ್‌ನಲ್ಲಿ 5 ಕೋಟಿ ರೂ. ಮೀಸಲಿಟ್ಟು ರಾಜಗೋಪುರ ನಿರ್ಮಾಣ ಮಾಡಲಾಯಿತು. ಇನ್ನೊಂದು ಕ್ಯಾಬಿನೆಟ್ ಮೀಟಿಂಗ್ ನಡೆದಿದ್ದರೆ 16.5 ಕೋಟಿ ರೂ. ಅನುಮೋದನೆ ಆಗುತ್ತಿತ್ತು. ಆಗ ರಾಜಕೀಯ ಬದಲಾವಣೆಯಿಂದ ಇದು ಸಾಧ್ಯವಾಗಲಿಲ್ಲ ಎಂದರು.
ಬೊಮ್ಮಾಯಿ ಸರ್ಕಾರದಲ್ಲಿ ರೇಷ್ಮೆ ಇಲಾಖೆ ಮಂತ್ರಿಯಾಗಿದ್ದ ಸಾ.ರಾ.ಮಹೇಶ್ ಅವರು, ಪಿಡಬ್ಲುೃಡಿಗೆ ಮೂಗೂರಿಲ್ಲಿ ಜಾಗ ಮಂಜೂರು ಮಾಡಿಸಿದರು. 10 ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರದ ಸಚಿವ ಎಚ್.ಸಿ.ಮಹದೇವಪ್ಪ ಅವರ ಸಹಕಾರದಿಂದ ನೂತನವಾಗಿ ಸರ್ಕಾರಿ ಅತಿಥಿ ವಸತಿ ಗೃಹದ ಕಾಮಗಾರಿ ಆರಂಭವಾಗಿದೆ ಎಂದರು. ಟ್ರಸ್ಟ್ ವತಿಯಿಂದ ನಿರ್ಮಾಣವಾಗುತ್ತಿರುವ ಸಮುದಾಯ ಭವನವು ವಿಶಾಲ ಸಭಾಂಗಣವು 12 ಕೋಠಡಿಗಳನ್ನು ಒಳಗೊಳ್ಳಲಿದೆ. ಇದಕ್ಕೆ ದೇವಿಯ ಭಕ್ತರು, ದೇವಾಲಯದ ಟ್ರಸ್ಟ್‌ನ ಮುಖ್ಯಸ್ಥರು ಕೈ ಜೋಡಿಸಿ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಟ್ರಸ್ಟ್‌ನ ಮಾಜಿ ಅಧ್ಯಕ್ಷ ಲಿಂಗಪ್ಪ, ಮುಖಂಡರಾದ ಎಂ.ಡಿ.ಬಸವರಾಜು, ಡಾ.ದೇವೇಗೌಡ, ಬ್ಯಾಡರಹಳ್ಳಿ ಕಾಡಪ್ಪ , ದೇವಿ ಎಲೆಕ್ಟ್ರಾನಿಕ್ಸ್ ಮಾಲೀಕರಾದ ಹರೀಶ್, ಮೂಗೂರಯ್ಯ, ರಾಮಕೃಷ್ಣ, ಧನಂಜಯ, ರವಿಶಂಕರ್, ರಂಗಸ್ವಾಮಿ, ನಾಗೇಶ್, ಕುಮಾರ್, ಅರ್ಚಕರಾದ ಸುಂದರಪ್ಪ, ಹರೀಶ್, ರವಿ ಇತರರು ಇದ್ದರು.