

ಬೆಂಗಳೂರು: ಯಲಹಂಕ ಕೆರೆಯಿಂದ ಹೊರಬರುವ ಹೆಚ್ಚುವರಿ ನೀರು ಸರಾಗವಾಗಿ ಮುಂದಕ್ಕೆ ಹರಿದುಹೋಗಲು ಹಾಲಿಯಿರುವ ಸಣ್ಣ ನೀರುಗಾಲುವೆಯನ್ನು 100 ಅಡಿಗೆ ವಿಸ್ತರಿಸುವ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳಲು ಬಿಬಿಎಂಪಿ ಮುಂದಾಗಿದೆ.
ಮಹಾನಗರದ ಬಹುತೇಕ ಕೆರೆಗಳು ಕಲುಷಿತಗೊಂಡಿದ್ದರೆ, ನಗರದ ಉತ್ತರ ಭಾಗದ ಈ ಎರಡೂ ಬೃಹತ್ ಕೆರೆಗಳು ಇದಕ್ಕೆ ಅಪವಾದದಂತಿವೆ. ಆದರೆ, ಒಂದು ಕರೆಯಿಂದ ಇನ್ನೊಂದು ಕೆರೆಗೆ ಸಂಪರ್ಕಿಸುವ ರಾಜಕಾಲುವೆ ಮಾತ್ರ ಕಿರಿದಾಗಿದೆ. ದಶಕಗಳಿಂದ ನೈಸರ್ಗಿಕವಾಗಿಯೇ ಇದ್ದ ಈ ರಾಜಕಾಲುವೆಯ ನಿರ್ವಹಣೆ ಕೊರತೆಯಿಂದ ಸೊರಗಿತ್ತು. ಕೆಲವೆಡೆ ಏಳೆಂಟು ಅಡಿಯಷ್ಟು ಮಾತ್ರ ಅಗಲವಿರುವ ಈ ನೀರುಗಾಲುವೆಯನ್ನು ಒಮ್ಮೆಲೆ 100 ಅಡಿಗೆ ವಿಸ್ತರಿಸಲು ಬಿಬಿಎಂಪಿಯು ಬರ್ ವಲಯದ ಜಾಗವನ್ನು ಬಳಸಿಕೊಳ್ಳಲು ನಿರ್ಧರಿಸಿದೆ.
ಯಲಹಂಕ ಕೆರೆಯಿಂದ ಕೋಗಿಲು ಕ್ರಾಸ್ ಮೂಲಕ ಜಕ್ಕೂರು ಕೆರೆಗೆ ಸಂಪರ್ಕ ಕಲ್ಪಿಸುವ 2.62 ಕಿ.ಮೀ. ಉದ್ದದ ಯೋಜನೆಗಾಗಿ ಜಾಗವನ್ನು ಸ್ವಾಧೀನಕ್ಕೆ ಪಡೆಯಲು ಕೆಲವೆಡೆ ಖಾಸಗಿ ಸ್ವತ್ತುಗಳಿವೆ. ಇವುಗಳನ್ನು ಅಭಿವೃದ್ಧಿ ಹಕ್ಕಿನ (ಟಿಡಿಆರ್) ಎರಡು ಪಟ್ಟು ಪರಿಹಾರ ನೀಡಿ ವಶಕ್ಕೆ ಪಡೆಯಲು ಪಾಲಿಕೆಯು ತಿಳಿವಳಿಕೆ ನೋಟಿಸ್ ಹೊರಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಇದಕ್ಕೆ ಜಮೀನು ಬಿಟ್ಟುಕೊಡಬೇಕಿರುವ 120 ಸ್ವತ್ತು ದಾರರು ತಿಂಗಳೊಳಗೆ ಭೂದಾಖಲಾತಿಯ ವಿವರಗಳನ್ನು ಪಾಲಿಕೆಗೆ ಸಲ್ಲಿಸಬೇಕಿದೆ.
ಜೌಗು ಪ್ರದೇಶದಲ್ಲಿ ಕಾಮಗಾರಿ?:
ಉದ್ದೇಶಿತ ಯೋಜನೆಯು ಎರಡೂ ಕೆರೆಗಳ ಮಧ್ಯವಿರುವ ಜೌಗು ಪ್ರದೇಶದಲ್ಲಿ ಹಾದುಹೋಗಲಿವೆ. ಈಗಲೂ ಅರ್ಧದಷ್ಟು ಪ್ರದೇಶದಲ್ಲಿ ಖಾಲಿ ಜಾಗವಿದೆ. ಕೆಲ ಹೊಸ ಬಡಾವಣೆಗಳ ಮೂಲಕ ಹಾದುಹೋಗುವ ರಾಜಕಾಲುವೆ ಬಳಿಯಷ್ಟೇ ಕಟ್ಟಡಗಳಿವೆ. ಆದರೆ, ರಾಜಕಾಲುವೆ ವಿಸ್ತರಿಸುವ ಭರದಲ್ಲಿ ಜೌಗು ಪ್ರದೇಶವನ್ನೂ ಸೇರಿಸಿಕೊಂಡು 100 ಅಡಿ ವಿಸ್ತಾರಕ್ಕೆ ಹಿಗ್ಗಿಸುವ ಔಚಿತ್ಯದ ಬಗ್ಗೆ ಪಾಲಿಕೆ ಸ್ಪಷ್ಟನೆ ನೀಡಿಲ್ಲ. ಮೂರು ವರ್ಷಗಳ ಹಿಂದೆ ಯಲಹಂಕ ಕೆರೆ ಕೋಡಿ ಬಳಿ ಪ್ರವಾಹ ಉಂಟಾಗಿ ಹಲವು ಮನೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿತ್ತು. ಯಲಹಂಕದ ಇತಿಹಾಸದಲ್ಲಿ ಮೊದಲ ಬಾರಿಗೆ ಉಂಟಾದ ಈ ಅವಘಡದಿಂದಾಗಿ ಸ್ಥಳಿಯರು ಅಚ್ಚರಿ ವ್ಯಕ್ತಪಡಿಸಿದ್ದರು. ಒಂದೆರಡು ಅಪಾರ್ಟ್‌ಮೆಂಟ್‌ಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಕ್ಕೆ ಪ್ರವಾಹ ಉಂಟಾಗಲು ಕಾರಣ ಎಂಬುದನ್ನು ಪಾಲಿಕೆ ತನಿಖೆಯಿಂದ ಬಹಿರಂಗಗೊಂಡಿತ್ತು. ಒತ್ತುವರಿ ತೆರವುಗೊಳಿಸಿ ಕೋಡಿ ಭಾಗದಿಂದ ಕೆರೆನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡುವುದಾಗಿ ಅಧಿಕಾರಿ ವರ್ಗ ಸಮಜಾಯಿಷಿ ನೀಡಿತ್ತಾದರೂ, ಬಳಿಕ ಕೆಲಸ ಮಾಡಲಿಲ್ಲ. ಆದರೂ, ನೀರುಗಾಲುವೆಯನ್ನು ಕಾಂಕ್ರೀಟ್ ತಡೆಗೋಡೆ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕೆಲಸವಷ್ಟೇ ಕೈಗೊಳ್ಳಲಾಯಿತು.
ಈಗ ದಿಢೀರ್ ಆಗಿ ನೀರುಗಾಲುವೆಯನ್ನು ಜೌಗು ಪ್ರದೇಶದಲ್ಲಿ ನಿರ್ಮಿಸಲು ಹೊರಟಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ನೀರುಗಾಲುವೆ ಹಾದುಹೋಗುವ ಮಾರ್ಗದಲ್ಲಿ ಹೆಚ್ಚಿನ ಜನವಸತಿ ಇಲ್ಲ. ಆದರೆ, ಪಾಲಿಕೆಯು ಈ ರಾಜಕಾಲುವೆ ಇಕ್ಕೆಲಗಳಲ್ಲಿ ಮುಕ್ತ ಜಾಗ ಮೀಸಲಿಡಲು ಸರ್ವಿಸ್ ರೋಡ್ ಮಾದರಿಯಲ್ಲಿ ರಸ್ತೆ ನಿರ್ಮಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಇತ್ತೀಚಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಗರದ ಪ್ರಮುಖ ಭಾಗಗಳಲ್ಲಿ ರಾಜಕಾಲುವೆಗಳ ಎರಡೂ ಬದಿ ರಸ್ತೆ ನಿರ್ಮಿಸುವ ಹೇಳಿಕೆ ನೀಡಿದ್ದರು. ಇದಕ್ಕೆ ಎಷ್ಟು ಮೊತ್ತ ಖರ್ಚಾಗುವುದೆಂದು ಇನ್ನೂ ಅಂದಾಜು ಮಾಡಿಲ್ಲ. ಹೀಗಿದ್ದರೂ, ಯಲಹಂಕ ಕೆರೆ-ಜಕ್ಕೂರು ಕೆರೆ ಸಂಪರ್ಕಿಸುವ ರಾಜಕಾಲುವೆ ವಿಸ್ತರಣೆ ಯೋಜನೆ ಅಗತ್ಯ ಇದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.