ಹೆಬ್ಬಾಳ ಬಳಿ 1.5 ಕಿ.ಮೀ. ಉದ್ದದ ಟನಲ್ ನಿರ್ಮಾಣ: ಬಿಬಿಎಂಪಿ ಸಿದ್ಧತೆ

bbmp office
Published on

ಬೆಂಗಳೂರು: ನಗರದ ಹೆಬ್ಬಾಳ ರಿಂಗ್ ರಸ್ತೆ ಜಂಕ್ಷನ್‌ನಲ್ಲಿ ಉಂಟಾಗಿರುವ ಸಂಚಾರ ಸಿಕ್ಕು ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಉದ್ದೇಶಿತ ಟ್ವಿನ್ ಟನಲ್ ಜತೆಗೆ, ಹೊಸದಾಗಿ ಮತ್ತೊಂದು ಸುರಂಗ ರಸ್ತೆ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ.

ಪ್ರಸ್ತುತ ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ ನಿರ್ಮಿಸಲಾಗುವ ಕಾರಿಡಾರ್ - 1ರ ಸುರಂಗ ಮಾರ್ಗಕ್ಕೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಈ ಕಾಮಗಾರಿಯು ಎರಡು ಹಂತಗಳಲ್ಲಿ ಜಾರಿಯಾಗಲಿದ್ದು, ಮುಂದಿನ ತಿಂಗಳು ಟೆಂಡರ್ ಅಂತಿಮಗೊಳಿಸಿ ಆರ್ಹ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವ ಸಾಧ್ಯತೆ ಇದೆ. ಈ ಪ್ರಕ್ರಿಯೆ ನಡೆಯುತ್ತಿರುವಾಗಲೇ ಹೆಬ್ಬಾಳ ಕೆರೆ ಕೋಡಿಯಿಂದ ಪಶುವೈದ್ಯ ಕಾಲೇಜು ವರೆಗೆ 1.5 ಕಿ.ಮೀ. ಉದ್ದದ ಟನಲ್ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಪಾಲಿಕೆ ಸಿದ್ಧತೆ ಆರಂಭಿಸಿದೆ.

ಟ್ವಿನ್ ಟನಲ್ ಎಸ್ಟೀಮ್ ಮಾಲ್ ಬಳಿ ನಗರದತ್ತ ಸಾಗಲು ಪ್ರವೇಶ/ನಿರ್ಗಮನಕ್ಕೆ ಅವಕಾಶ ಇರಲಿದೆ. ಜತೆಗೆ ಕೆ.ಆರ್.ಪುರದತ್ತಲೂ ಸಾಗಲು ಲೂಪ್ ನಿರ್ಮಿಸಲಾಗುತ್ತದೆ. ಆದರೆ, ನಗರದಿಂದ ಏರ್‌ಪೋರ್ಟ್‌ನತ್ತ ಸಾಗಲು ಹೆಬ್ಬಾಳ ಜಂಕ್ಷನ್ ಬಳಿ ಸಮಸ್ಯೆಯಾಗುತ್ತಿದೆ. ಇಲ್ಲಿ ಕೆರೆ ಇರುವುದರಿಂದ ರಸ್ತೆ ವಿಸ್ತರಣೆಗೆ ಜಾಗದ ಅಭಾವ ಇದೆ. ಈ ಹಿನ್ನೆಲೆಯಲ್ಲಿ ಪಶುವೈದ್ಯಕೀಯ ಕಾಲೇಜು ಬಳಿಯಿಂದ ಹೆಬ್ಬಾಳದ ಕೆರೆ ಕೋಡಿ ವರೆಗಿನ 1.5 ಕಿ.ಮೀ. ಉದ್ದಕ್ಕೂ ಹಾಲಿ ಸರ್ವಿಸ್ ರಸ್ತೆ ಹಾದುಹೋಗುವ ಕೆಳಭಾಗದಲ್ಲಿ ದ್ವಿಪಥವುಳ್ಳ ಸುರಂಗ ರಸ್ತೆಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ.

ಭೂಸ್ವಾಧೀನಕ್ಕೆ ಅಧಿಸೂಚನೆ:

ಹೊಸ ಟನಲ್ ರಸ್ತೆಯು ಒಂದು ಬದಿಯ ಸಂಚಾರದ ಉಪಯೋಗಕ್ಕೆ ಅವಕಾಶ ಸಿಗಲಿದೆ. ಹೀಗಾಗಿ ಯೋಜನಾ ವೆಚ್ಚ ಹೆಚ್ಚಾಗದು. ಮುಖ್ಯವಾಗಿ ಹೊಸ ಟನಲ್ ಮಾರ್ಗಕ್ಕಾಗಿ ಹೆಚ್ಚಿನ ಜಾಗವನ್ನು ಸ್ವಾಧೀನಕ್ಕೆ ಪಡೆಯುವ ಅಗತ್ಯ ಇಲ್ಲ. ಟನಲ್ ಬರುವ ಜಾಗದಲ್ಲಿ ಖಾಸಗಿಯವರ ಬೆರಳೆಣಿಕೆಯಷ್ಟು ಸ್ವತ್ತು ಮಾತ್ರ ಇದ್ದು, ಉಳಿದ ಜಾಗ ಸರ್ಕಾರಿ ಸಂಸ್ಥೆಗಳಿಗೆ ಸೇರಿದ್ದಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಕೆಲ ಸ್ವತ್ತುಗಳನ್ನು ಸುಪರ್ದಿಗೆ ಪಡೆಯಲು ಭೂಸ್ವಾಧೀನ ಅಧಿಸೂಚನೆ ಹೊರಡಿಸಿದ್ದು, ಟಿಡಿಆರ್ ಮುಲಕ ಪರಿಹಾರ ವಿತರಿಸಲಾಗುತ್ತದೆ. ಈ ಟನಲ್ ಕಾಮಗಾರಿಯನ್ನು ಬಿ-ಸ್ಮೈಲ್ ಸಂಸ್ಥೆ ವತಿಯಿಂದ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಟನಲ್ ರಸ್ತೆಗೆ ಹಿಂದೆಯೇ ನಡೆದಿತ್ತು ಯತ್ನ:

ಬಳ್ಳಾರಿ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಲ್ಪಿಸಲು ಒಂದೂವರೆ ದಶಕದ ಹಿಂದೆಯೇ ಟನಲ್ ರಸ್ತೆ ನಿರ್ಮಿಸುವ ಯೋಜನೆ ಸಿದ್ಧಪಡಿಸಲಾಗಿತ್ತು. ಹೆಬ್ಬಾಳದ ಪೊಲೀಸ್ ಠಾಣೆಯಿಂದ ಹೈಗ್ರೌಂಡ್ಸ್ ವರೆಗೆ 7 ಕಿ.ಮೀ. ಉದ್ದ ಸುರಂಗ ರಸ್ತೆಯನ್ನು ನಿಮರ್ನಿಸಲು ಬಿಡಿಎಯಿಂದ ಯೋಜನೆ ರೂಪಿಸಲಾಗಿತ್ತು. 2008ರ ವೇಳೆ ಈ ಯೋಜನೆ ಜಾರಿಗೆ ಸರ್ವೆ ಕೂಡ ನಡೆಸಲಾಗಿತ್ತು. ವಿದೇಶಿ ಕಂಪನಿಯಿಂದ ಕಾಮಗಾರಿ ಕೈಗೊಳ್ಳಲು ಬಿಡಿಎ ಹಾಗೂ ಸರ್ಕಾರದ ಮಟ್ಟದಲ್ಲಿ ಹಲವು ಸುತ್ತಿನ ಸಭೆ, ಚರ್ಚೆ ಆಗಿತ್ತು. ಆದರೆ, ಹಣ ತೊಡಗಿಸುವುದು ಹಾಗೂ ನಿರ್ವಹಣೆ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ಆದ ವಿಳಂಬದಿಂದ ಪ್ರಾಜೆಕ್ಟ್ ತೆರೆಮರೆಗೆ ಸರಿಯಿತು. ಆನಂತರ ಇದೇ ಮಾರ್ಗದಲ್ಲಿ ಬಸವೇಶ್ವರ ವೃತ್ತದಿಂದ ಹೆಬ್ಬಾಳದ ಪೊಲೀಸ್ ಠಾಣೆ ವರೆಗೆ 7.1 ಕಿ.ಮೀ. ಉದ್ದ ಉಕ್ಕಿನ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಿತ್ತಾದರೂ, ಪರಿಸರ ಕಾರಣದಿಂ ಆಗಿನ ಕಾಂಗ್ರೆಸ್ ಸರ್ಕಾರ ಯೋಜನೆಯನ್ನು ಕೈಬಿಟ್ಟಿತು.

ಟ್ವಿನ್ ಟನಲ್‌ಗೆ 10 ಕಂಪನಿಗಳ ಆಸಕ್ತಿ:

ಹೆಬ್ಬಾಳ - ಸಿಲ್ಕ್ ಬೋರ್ಡ್ ನಡುವೆ ನಿರ್ಮಿಸಲು ಉದ್ದೇಶಿಸಿರುವ ಟ್ವಿನ್ ಟನಲ್‌ಗೆ ದೇಶದ ಮುಂಚೂಣಿ ಕಂಪನಿಗಳಾದ ಟಾಟಾ, ಅದಾನಿ ಗ್ರೂಪ್, ಮೇಘಾ ಇನ್ಪ್ರಾಸ್ಟ್ರಕ್ಚರ್ ಲಿ. ಸೇರಿ ಹತ್ತು ಕಂಪನಿಗಳು ಗುತ್ತಿಗೆ ವಹಿಸಿಕೊಳ್ಳುವ ಕುರಿತು ಆಸಕ್ತಿ ವ್ಯಕ್ತಪಡಿಸಿದೆ.

ಕಳೆದ ತಿಂಗಳು ಆಹ್ವಾನಿಸಿದ್ದ 16.75 ಕಿ.ಮೀ. ಉದ್ದದ 17,698 ಕೋಟಿ ರೂ. ಮೊತ್ತದ ಎರಡು ಪ್ಯಾಕೇಜ್‌ಗಳಿಗೆ ಬೆಂಗಳೂರು ಸ್ಮಾರ್ಟ್ ಇನ್ಪ್ರಾಸ್ಟ್ರಕ್ಚರ್ ಲಿ. (ಬಿ-ಸ್ಮೈಲ್) ನ ಟೆಂಡರ್ ಪ್ರಸ್ತಾಪಕ್ಕೆ ಸ್ಪಂದಿಸಿರುವ ವಿವಿಧ ಕಂಪನಿಗಳ ಪ್ರತಿನಿಧಿಗಳೊಂದಿಗೆ ಪಾಲಿಕೆ ಅಧಿಕಾರಿಗಳು ಪೂರ್ವಭಾವಿ ಚರ್ಚೆ ನಡೆಸಿದ್ದಾರೆ. ‘ಬೂಟ್’ ಮಾದರಿಯಲ್ಲಿ ಯೋಜನೆಯನ್ನು ಪಿಪಿಪಿ ಅಡಿಯಲ್ಲಿ ಕಾರ್ಯಗತಗೊಳಿಸುವ ಸಂಬಂಧ ಪ್ರತಿನಿಧಿಗಳು ಬಿ-ಸ್ಮೈಲ್ ಸಂಸ್ಥೆಯಿಂದ ಹೆಚ್ಚಿನ ಮಾಹಿತಿಯನ್ನು ಕೋರಿದೆ. ಟೆಂಡರ್‌ಗೆ ಸೆ.2ರಂದು ಬಿಡ್ ಸಲ್ಲಿಸಲು ಅಂತಿಮ ದಿನವಾಗಿದ್ದು, ಆ ಬಳಿಕ ಆಸಕ್ತಿ ಖಾತ್ರಿಪಡಿಸುವ ಕಂಪನಿಗೆ ಗುತ್ತಿಗೆ ವಹಿಸುವ ನಿರ್ಧಾರ ಕೈಗೊಳ್ಳಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net