

ಹುಬ್ಬಳ್ಳಿ: ಧಾರವಾಡದ ನವಲೂರಿನಿಂದ ಹರಿಯಾಣದ ಬಲ್ಲಬಘಡಗೆ ಟಾಟಾ ಹಿತಾಚಿ ಕಂಪನಿಯ 74 ನಿರ್ಮಾಣ ಯಂತ್ರೋಪಕರಣಗಳನ್ನು ರೈಲು ಮಾರ್ಗದಲ್ಲಿ ಸಾಗಿಸಲಾಯಿತು.
ಎಕ್ಸ್ಕೇವೆಟರ್ಸ್ ಹಾಗೂ ಬ್ಯಾಕ್ಹೋ ಲೋಡರ್ಸ್ಗಳನ್ನು 34 ಡಿಬಿಕೆಎಂ ವ್ಯಾಗನ್ಗಳ ಮೇಲೆ ಹೇರಿ ಸಾಗಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಹಿತಾಚಿ ಕಂಪನಿಯ ಎಂಡಿ ಸಂದೀಪ ಸಿಂಗ್, ನಮ್ಮ ಉತ್ಪನ್ನಗಳನ್ನು ಹೀಗೆ ರೈಲು ಮಾರ್ಗದಲ್ಲಿ ಸಾಗಿಸುವುದರಿಂದ ಇಂಧನ ವೆಚ್ಚ ಉಳಿತಾಯವಾಗಲಿದೆ. ಇದರಿಂದ ಇಂಧನ ಕ್ಷಮತೆಯಲ್ಲಿ ಸುಸ್ಥಿರತೆಯನ್ನು ಸಾಧಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಿಸಿದರು.
ನೈಋತ್ಯ ರೈಲ್ವೆಯ ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕಿ ಹರಿತಾ ಎಸ್. ಮಾತನಾಡಿ, ಈ ಯಂತ್ರಗಳನ್ನು ರಸ್ತೆ ಮಾರ್ಗದಲ್ಲಿ ಸಾಗಿಸಿದರೆ 16 ದಿನಗಳು ಬೇಕಾಗುತ್ತಿದ್ದವು. ರೈಲು ಮಾರ್ಗದಲ್ಲಿ 8 ದಿನಗಳಲ್ಲಿ ನಿಗದಿತ ಸ್ಥಳಕ್ಕೆ ತಲುಪಲಿದೆ. ಇದರಿಂದ ರೈಲ್ವೆಯಲ್ಲಿ ಸರಕು ಸಾಗಣೆಯ ಉಪಕ್ರಮವು ಇನ್ನಷ್ಟು ವಿಸ್ತರಣೆಗೊಳ್ಳಲಿದೆ ಎಂದರು.
ಟಾಟಾ ಹಿತಾಚಿ ಕಂಪನಿಯ ಗೋವಿಂದ ಕುಲಕರ್ಣಿ, ನೈಋತ್ಯ ರೈಲ್ವೆಯ ಅಧಿಕಾರಿಗಳಾದ ಡಾ. ಸುಮಂತ ವಿ.ಡಿ. ಹಾಗೂ ಸಂತೋಷ ಹೆಗಡೆ ಇದ್ದರು.