ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಅಂತಾರಾಷ್ಟ್ರೀಯ ಹೂವಿನ ಮಾರುಕಟ್ಟೆ ನಿರ್ಮಾಣ

IMG_20250703_195502.jpg
Published on

ಚಿಕ್ಕಬಳ್ಳಾಪುರ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿರುವುದರ ನಡುವೆ ಈ ಭಾಗದಲ್ಲಿ ಪುಷ್ಪೋದ್ಯಮವು ಮತ್ತಷ್ಟು ಲಾಭದಾಯಕವಾಗುವ ನಿರೀಕ್ಷೆಯನ್ನು ಹೆಚ್ಚಿಸಿದೆ.
ಮೊದಲ ಹಂತವಾಗಿ ತಾಲೂಕಿನ ನಂದಿಕ್ರಾಸ್‌ ಸಮೀಪದ ತೋಟಗಾರಿಕಾ ಇಲಾಖೆಗೆ ಸೇರಿದ್ದ 20 ಎಕರೆ ಜಾಗವನ್ನು ಮಾರುಕಟ್ಟೆಯ ನಿರ್ಮಾಣಕ್ಕಾಗಿ ಎಪಿಎಂಸಿಗೆ ಹಸ್ತಾಂತರಿಸಲಾಗಿದೆ. ಇದೀಗ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 141.5 ಕೋಟಿ ರೂ ಮಂಜೂರಾಗಿದೆ. ಇದರ ಜತೆಗೆ 10 ಕೋಟಿ ರೂ ವೆಚ್ಚದಲ್ಲಿ ಹೂವಿನ ಹರಾಜು ಕೇಂದ್ರ ನಿರ್ಮಾಣ ಘೋಷಣೆ ಸಹ ಆಗಿದೆ. ಇದರಿಂದ ಈ ಭಾಗದ ಹೂವು ಬೆಳೆಗಾರರಿಗೆ ಸುಗಮವಾಗಿ ವಹಿವಾಟು ನಡೆಸಲು ಅಗತ್ಯ ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆಯು ದೊರಕಿ, ಪುಷ್ಪೋದ್ಯಮ ಅಭಿವೃದ್ಧಿ ಹೊಂದುವ ನಿರೀಕ್ಷೆಯ ಮಾತುಗಳು ಕೇಳಿ ಬಂದಿವೆ.
ಅಂತರ್ಜಲ ಮಟ್ಟ ಕುಸಿತ, ಕೊಳವೆ ಬಾವಿ ವೈಫಲ್ಯ, ಮಳೆಯ ಅಭಾವ ಸೇರಿದಂತೆ ನೀರಾವರಿ ಸೌಕರ್ಯಗಳ ಕೊರತೆಯ ನಡುವೆಯೂ ಹೂವು, ಹಣ್ಣು, ತರಕಾರಿ, ಹಾಲು, ರೇಷ್ಮೆ ಕೃಷಿಯಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿದೆ. ಈ ಭಾಗದಿಂದ ಉತ್ಪನ್ನಗಳು ದೇಶದ ವಿವಿಧ ರಾಜ್ಯಗಳ ಜತೆಗೆ ವಿದೇಶಗಳಿಗೂ ರಫ್ತಾಗುತ್ತದೆ. ಪ್ರಗತಿಪರ ಕೃಷಿಕರಿಗೆ ಒಳ್ಳೆಯ ಆದಾಯ ಲಭಿಸುತ್ತಿದೆ. ಇದರ ನಡುವೆ ಮೂಲ ಸೌಕರ್ಯಗಳ ಕೊರತೆಯು ಹಿನ್ನಡೆಗೆ ಕಾರಣವಾಗಿದೆ.

*ಮಾರುಕಟ್ಟೆ ಸಮಸ್ಯೆ
ಜಿಲ್ಲೆಯಲ್ಲಿ ಪ್ರಸ್ತುತ ಹೂವಿನ ಮಾರುಕಟ್ಟೆ ಸಮಸ್ಯೆ ಇದೆ. ನಗರದ ಎಂ.ಜಿ.ರಸ್ತೆಯಲ್ಲಿರುವ ಎಪಿಎಂಸಿ ಆಡಳಿತ ಕಚೇರಿಯ ಜಾಗದಲ್ಲಿ ವಿವಿಧ ತರಕಾರಿ ಉತ್ಪನ್ನಗಳೊಂದಿಗೆ ಹೂವಿನ ಖರೀದಿ, ಸಾಗಾಣೆ ಪ್ರಕ್ರಿಯೆ ನಡೆಯುತ್ತಿದೆ. ಹಾಗೆಯೇ ಕರೊನಾ ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿರುವ ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿ ಕ್ರಾಸ್‌ ಬಳಿಯು ಹೂವಿನ ಮಾರುಕಟ್ಟೆ ಕಾರ್ಯ ನಿರ್ವಹಿಸುತ್ತಿದೆ. ಎರಡೂ ಕಡೆ ಸ್ಥಳವಿದ್ದರೂ ಹಲವು ಸಮಸ್ಯೆಗಳ ಕಾಟ ಮಾತ್ರ ತಪ್ಪಿಲ್ಲ. ನಗರದ ಹೃದಯಭಾಗದಲ್ಲಿರುವ ಜಾಗದಲ್ಲಿ ಟ್ರಾಫಿಕ್‌ ಜಾಮ್‌, ಇಕ್ಕಟ್ಟಿನ ಸ್ಥಳ, ಬೇರೆ ಬೇರೆ ವಹಿವಾಟಿನ ಕಿರಿಕಿರಿ ಬಾಧಿಸಿದರೆ, ಚೊಕ್ಕಹಳ್ಳಿ ಬಳಿ ಶೌಚಗೃಹ, ಧೂಳು ಆವರಿಸುವುದು, ಮಳೆ ಬಂದಾಗ ಜಾಗ ಕೆಸರು ಗದ್ದೆಯಾಗಿ ಪರಿವರ್ತನೆ, ಹೂವಿನ ಉತ್ಪನ್ನಗಳ ನಾಶ, ತಾತ್ಕಾಲಿಕ ಮಳಿಗೆಗಳಲ್ಲಿ ಅಸಮರ್ಪಕ ನಿರ್ವಹಣೆ ಸೇರಿದಂತೆ ನಾನಾ ಸಮಸ್ಯೆಗಳಿವೆ.

*ಸೂಕ್ತ ಜಾಗದ ಕೊರತೆ
ನಗರದಿಂದ ಹೂವಿನ ಮಾರುಕಟ್ಟೆ ತಾತ್ಕಾಲಿಕ ಸಂದರ್ಭದಲ್ಲಿ ಜಾಗದ ವಿಚಾರವಾಗಿ ನಿರಂತರ ಹೋರಾಟಗಳು ನಡೆದಿದ್ದವು. ಇದೇ ವೇಳೆ ಚೊಕ್ಕಹಳ್ಳಿ ಕ್ರಾಸ್‌ ಸಮೀಪ ಸರ್ಕಾರಿ ಜಾಗವನ್ನು ಮಾರುಕಟ್ಟೆ ನಿರ್ಮಾಣಕ್ಕೆ ಗುರುತಿಸಲಾಗಿದ್ದರೂ ಅಸಮರ್ಪಕತೆ ಹಿನ್ನೆಲೆಯಲ್ಲಿ ವಿವಾದ ಉಂಟಾಗಿತ್ತು. ಇದರ ನಡುವೆ ನಂದಿ ಕ್ರಾಸ್‌ ನಲ್ಲಿನ ಮೆಗಾ ಡೇರಿಗೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ 20 ಎಕರೆ ಮಂಜೂರಾತಿ ಮೂಲಕ ಅಸಮಾಧಾನವನ್ನು ನೀಗಿಸಲಾಗಿದೆ. ಈಗ ಹಣವೂ ಮಂಜೂರಾಗಿದೆ. ತ್ವರಿತವಾಗಿ ಕಾಮಗಾರಿಗೆ ಭೂಮಿ ಪೂಜೆ, ಕೆಲಸವನ್ನು ಪೂರ್ಣಗೊಳಿಸುವ ಮೂಲಕ ಆಡಳಿತ ಯಂತ್ರಾಂಗವು ಮೆಚ್ಚುಗೆಗೆ ಪಾತ್ರವಾಗಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net