ಕಾನೂನು ವಿವಿಯಲ್ಲಿ ಸಂವಿಧಾನ ಜಾಗೃತಿ ಜಾಥಾ

IMG_20241126_201951_772.jpg
Published on

ಹುಬ್ಬಳ್ಳಿ: ಇಲ್ಲಿಯ ನವನಗರದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಮತ್ತು ಕಾನೂನು ಸೇವಾ ಕೋಶದ ವತಿಯಿಂದ ಮಂಗಳವಾರ ಸಂವಿಧಾನ ಸಮರ್ಪಣೆ ದಿನ ಆಚರಿಸಲಾಯಿತು.

ಈ ಹಿನ್ನೆಲೆಯಲ್ಲಿ ಸಂವಿಧಾನ ಸಪ್ತಾಹ ಕಾರ್ಯಕ್ರಮದಲ್ಲಿ ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಪ್ರಬಂಧ, ಮಾತುಗಾರಿಕೆ ಮತ್ತು ಪೋಸ್ಟರ್ ಅಭಿಯಾನಗಳನ್ನು ಸಂವಿಧಾನ ವಿಷಯಕ್ಕೆ ಸಂಬಂಧಿಸಿ ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಕಾನೂನು ಶಾಲೆಯಿಂದ ನವನಗರದ ವರೆಗೆ ಸುಮಾರು 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂವಿಧಾನಪರ ಜಾಗೃತಿ ಘೋಷಣೆಗಳನ್ನು ಕೂಗುತ್ತ ಜಾಥಾ ನಡೆಸಿದರು.

ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ್ ಮಾತನಾಡಿ, ಕಾನೂನು ವಿದ್ಯಾರ್ಥಿ ಅಷ್ಟೇ ಅಲ್ಲ ಸಂವಿಧಾನ ಜಾಗೃತಿ ಮೂಡಿಸುವ ಹೊಣೆಗಾರಿಕೆ ದೇಶದ ಪ್ರತಿಯೊಬ್ಬ ಭಾರತೀಯರ ಮೇಲಿದೆ. ಸಂವಿಧಾನದ ಮೌಲ್ಯಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಹಿರಿಯ ಪ್ರಾಧ್ಯಾಪಕ ಡಾ. ಜಿ.ಬಿ. ಪಾಟೀಲ, ಆಡಳಿತಾಂಗ ಕುಲಸಚಿವೆ ಅನುರಾಧ ವಸ್ತ್ರದ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಸಿ. ಬಸವರಾಜು ಮಾತನಾಡಿ, ಸಂವಿಧಾನವಿಲ್ಲದೆ ಪ್ರಜಾಪ್ರಭುತ್ವವಿಲ್ಲ ಹಾಗೂ ರಾಷ್ಟ್ರದ ಧರ್ಮವು ಅದರ ಸಂವಿಧಾನವಾಗಿದೆ. ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನಾ ಕರಡು ಸಮಿತಿಯಲ್ಲಿ ಮಹತ್ತರ ಕಾರ್ಯ ಕೈಗೊಂಡು ಸ್ವತಂತ್ರ ಭಾರತಕ್ಕೆ ಬಹಳ ವಿಶಾಲವಾದ ಸಂವಿಧಾನ ರಚನೆ ಮಾಡಿ ನವೆಂಬರ್ 26, 1949ರಂದು ಸಮಿತಿಯ ಅಧ್ಯರಿಗೆ ಸಮರ್ಪಣೆ ಮಾಡಿದ ದಿನವೇ ಈ ಸುದಿನ ಎಂದು ಹೇಳಿದರು.

ಹಣಕಾಸು ಅಧಿಕಾರಿ ಸಂಜೀವಕುಮಾರ ಸಿಂಗ್, ಕಾರ್ಯಕ್ರಮ ಸಂಯೋಜಕ ಐ.ಬಿ. ಬಿರಾದಾರ, ಡಾ. ಭೀಮಾಬಾಯಿ ಮೂಲಗೆ ಉಪಸ್ಥಿತರಿದ್ದರು.

ರಶ್ಮಿ ಕೌಶಿಕ ಪ್ರಾರ್ಥಿಸಿದರು, ಪ್ರತಿಕ್ಷಾ ಕುಲಕರ್ಣಿ  ನಿರೂಪಿಸಿದರು, ಸಷ್ಟಿ ಗೋಲೆಕರ ಸ್ವಾಗತಿಸಿದರು, ಅಭಿಷೇಕ ಹಮ್ಮಿಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net