

ಮೈಸೂರು: ರಾಷ್ಟ್ರದಲ್ಲಿ ಮಹಿಳಾ ಕಾರ್ಮಿಕರ ಸಾಮಾಜಿಕ, ಆರ್ಥಿಕ ಭದ್ರತೆಗೆ ಸಂವಿಧಾನ ತಿದ್ದುಪಡಿಯಾಗಬೇಕಿದೆ ಎಂದು ಕರ್ನಾಟಕ ರಾಜ್ಯ ಗಾರ್ಮೆಂಟ್ಸ್ ಲೇಬರ್ ಯೂನಿಯನ್ ಅಧ್ಯಕ್ಷೆ ವಿ.ಪಿ.ರುಕ್ಮಿಣಿ ಅಭಿಪ್ರಾಯಪಟ್ಟರು.
ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಇಂದಿರಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ ಹಾಗೂ ಜಿಲ್ಲಾ ಕಾನೂನು ವಿಭಾಗದಿಂದ ಆಯೋಜಿಸಿದ್ದ ‘ಕಾರ್ಮಿಕ ಎಂಬ ಸೂರ್ಯನ ರಕ್ಷಣೆ ಮತ್ತು ಹೊಣೆ’ ವಿಷಯ ಕುರಿತ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರು ದೇಶದ ಅಭಿವೃದ್ಧಿಯ ಶಕ್ತಿ. ಮಹಿಳಾ ಕಾರ್ಮಿಕರಿಗೆ ವಿಶೇಷ ಕಾನೂನು ರೂಪಿಸುವುದರ ಮೂಲಕ ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸಿ ಸ್ವಾವಲಂಬಿಗಳಾಗಲು ಉತ್ತೇಜಿಸಬೇಕು ಎಂದರು.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗಾರ್ಮೆಂಟ್ಸ್‌ಗಳು ಹರಡಿಕೊಂಡಿವೆ. ಇವುಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಸೂಕ್ತ ರೀತಿಯ ಭದ್ರತೆ ಮತ್ತು ಸವಲತ್ತು ಒಡಗಿಸಿಕೊಡಬೇಕು. ನಾನು ಒಬ್ಬ ಗ್ರಾಮೆಂಟ್ಸ್‌ನಲ್ಲಿ ಉದ್ಯೋಗಿಯಾಗಿ ಸೇರಿ ಅಲ್ಲಿ ಮಹಿಳೆಯರ ಮೇಲೆ ನೆಡೆಯುತ್ತಿದ್ದ ದೌರ್ಜನ್ಯ, ದಬ್ಬಾಳಿಕೆ, ಶೋಷಣೆಯನ್ನು ಕಣ್ಣಾರೆ ಕಂಡಿದ್ದೇನೆ. ಅಲ್ಲದೆ, ಇಂತಹ ದೌರ್ಜನ್ಯವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದೆ. ನಂತರದ ದಿನಗಳಲ್ಲಿ ದುಡಿಯುವ ಮಹಿಳೆಯರ ಪರವಾಗಿ ಇರುವ ಕಾನೂನುಗಳನ್ನು ತಿಳಿದುಕೊಂಡು ಅವುಗಳನ್ನು ಎಲ್ಲ ಮಹಿಳಾ ಕಾರ್ಮಿಕರಿಗೂ ತಿಳಿಸಲು ಶ್ರಮಿಸಿದೆ. ಜತೆಗೆ, ಮಹಿಳಾ ಗಾರ್ಮೆಂಟ್ಸ್‌ನಲ್ಲಿ ಸಂಘಟನೆ ಆರಂಭಿಸಿ ನಮ್ಮ ಹಕ್ಕಿಗಳಿಗಾಗಿ ಹೋರಾಡುವ ಒಂದು ವೇದಿಕೆ ಸೃಷ್ಟಿಸಿಕೊಂಡೆವು ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಪ್ರಮೋದ್ ಚಿಕ್ಕಮಣ್ಣೂರು ಮಾತನಾಡಿ, ಕೇಂದ್ರ ಸರ್ಕಾರ ಅಂಬಾನಿ, ಅದಾನಿ ಹೇಳಿದಂತೆ ಕಾರ್ಮಿಕ ಕಾಯ್ದೆಗಳನ್ನು ರೂಪಿಸುತ್ತಿದೆ. ಅವರವರ ಇಷ್ಟಾನುಸಾರ ಕಾಯಿದೆ, ಕಾನೂನುಗಳನ್ನು ರೂಪಿಸುತ್ತಿದೆ ಎಂದು ದೂರಿದರು.
ಕಾರ್ಮಿಕರಿಗೆ ಬಿಸಿಯೂಟದ ವ್ಯವಸ್ಥೆ ಮಾಡಿದರೆ ಅವರ ದಿನನಿತ್ಯದ ಬದುಕು ಸುಧಾರಣೆಯಾಗುತ್ತದೆ. ಆದರೆ ಬಿಜೆಪಿ ಸರ್ಕಾರ ಹಲವಾರು ಕಾರ್ಮಿಕ ವಿರೋಧಿ ಕಾನೂನುಗಳನ್ನು ರೂಪಿಸಿದೆ. ನೂತನ ಕಾರ್ಮಿಕ ಕಾಯ್ದೆಯ ಪ್ರಕಾರ ಮೊದಲು 100 ಜನ ಕಾರ್ಮಿಕರು ಕೆಲಸ ಮಾಡುವ ಕಾರ್ಖಾನೆಯನ್ನು ಮುಚ್ಚಲು ಸರ್ಕಾರದ ಅನುಮತಿ ಬೇಕಿತ್ತು. ಆದರೆ ಈಗ ಆ ಸಂಖ್ಯೆಯನ್ನು 300 ಜನಕ್ಕೆ ಏರಿಸಿ ದುಡಿಯುವವರಿಗೆ ಅನ್ಯಾಯ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳು ಸರ್ಕಾರದ ಹಾದಿ ತಪ್ಪಿಸುತ್ತಾರೆಯೇ ಹೊರತು ಕಾರ್ಮಿಕರ ಪರವಾಗಿ ನಿಲ್ಲುವುದಿಲ್ಲ. ಐಟಿ, ಬಿಟಿಯವರಿಗೆ ಯಾವುದೇ ಕಾಯ್ದೆ ಇಲ್ಲ. ಹಾಗಾಗಿ ಅವರ ಬದುಕು ಬಹಳ ದುಸ್ತರವಾಗಿದೆ. ರಾಜ್ಯದಲ್ಲಿ ಹೆಚ್ಚು ಬೃಹತ್ ಕೈಗಾರಿಕೆಗಳನ್ನು ತರಬೇಕು. ಆಗ ಮಾತ್ರ ಬಡವರ ಸ್ವಾವಲಂಬನೆ ಸಾಧ್ಯ. ಕಾರ್ಮಿಕ ಹೋರಾಟಗಾರರ ಬದುಕು ಕತ್ತಿಯ ಮೇಲೆ ನಡೆದಂತೆ. ದೇಶದಲ್ಲಿ ಶೇ.77 ಕಾರ್ಮಿಕರಿದ್ದು, ಅವರ ಪರವಾಗಿ ಸರ್ಕಾರಗಳು ನಿಲ್ಲಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿದರು. ರಾಜ್ಯ ಕಾರ್ಮಿಕ ವಿಭಾಗದ ಉಪಾಧ್ಯಕ್ಷೆ ಹರಣಿಗೌಡ, ಜಿಲ್ಲಾ ಕಾನೂನು ವಿಭಾಗದ ಅಧ್ಯಕ್ಷ ತಿಮ್ಮಯ್ಯ, ಜಿಲ್ಲಾ ಕಾರ್ಮಿಕ ವಿಭಾಗದ ಅಧ್ಯಕ್ಷ ಮಂಜು ಕೋಟೆ, ನಗರ ಕಾರ್ಮಿಕ ವಿಭಾಗದ ಅಧ್ಯಕ್ಷ ಇಫ್ತಿಯಾನ್, ಪದಾಧಿಕಾರಿಗಳಾದ ಹೆಡತಲೆ ಮಂಜುನಾಥ್, ಸಿದ್ದರಾಜು, ಶಿವಪ್ರಸಾದ್, ಪಾಳ್ಯ ಸುರೇಶ್, ಗಂಗಾಧರ್, ಮನೋನ್ಮಣಿ, ಮೈತ್ರಿ, ಉತ್ತನಹಳ್ಳಿ ಶಿವಣ್ಣ, ಪುಟ್ಟಸ್ವಾಮಿ, ಸಿದ್ದರಾಜು, ರೇವಣ್ಣ, ಭರತ್, ಪ್ರೇಮ್, ಸುರೇಶ್ ಇದ್ದರು.