ಬಸವಾದಿ ಶಿವಶರಣರ ಆಶಯದಂತೆ ಸಂವಿಧಾನ ರಚನೆ

ಅರಸೀಕೆರೆ ನಗರದ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕೆ.ಎಂ.ಶಿವಲಿಂಗೇಗೌಡ ಉದ್ಘಾಟಿಸಿದರು. ಎಂ.ಜಿ.ಸಂತೋಷ್ ಕುಮಾರ್, ಎಂ.ಸಮೀವುಲ್ಲಾ, ಮನೋಹರ್, ಎಚ್.ಟಿ.ಕೃಷ್ಣಮೂರ್ತಿ, ಸತೀಶ್, ಲೋಕೇಶ್ ಇದ್ದರು.
ಅರಸೀಕೆರೆ ನಗರದ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕೆ.ಎಂ.ಶಿವಲಿಂಗೇಗೌಡ ಉದ್ಘಾಟಿಸಿದರು. ಎಂ.ಜಿ.ಸಂತೋಷ್ ಕುಮಾರ್, ಎಂ.ಸಮೀವುಲ್ಲಾ, ಮನೋಹರ್, ಎಚ್.ಟಿ.ಕೃಷ್ಣಮೂರ್ತಿ, ಸತೀಶ್, ಲೋಕೇಶ್ ಇದ್ದರು.
Published on

ಅರಸೀಕೆರೆ: ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರ ಆಶಯದಂತೆ ಸಂವಿಧಾನ ರಚನೆಯಾಗಿದ್ದು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳಿನ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರದ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತಿ ಉದ್ಘಾಟಿಸಿ ಮಾತನಾಡಿ, ದೊರೆ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣ ಮೇಲು-ಕೀಳು ಎನ್ನದೆ ಅನುಭವ ಮಂಟಪದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಮೂಲಕ ಸಾಮರಸ್ಯ ಮೆರೆದಿದ್ದಾರೆ ಎಂದು ಸ್ಮರಿಸಿದರು.

ಜಾತೀಯತೆ ತೊಡೆದು ಹಾಕಬೇಕೆನ್ನುವ ಸಂಕಲ್ಪದೊಂದಿಗೆ ಅಂತರ್ಜಾತಿ ವಿವಾಹಕ್ಕೂ ಮನ್ನಣೆ ಕೊಟ್ಟಿದ್ದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಸಂವಿಧಾನದ ಮೂಲಕ ಅಂತಹದ್ದೇ ಕಾನೂನು ರೂಪಿಸಿದ್ದಾರೆ. ಡಾ.ಬಾಬು ಜಗಜೀವನರಾಮ್ ಹಸಿರುಕ್ರಾಂತಿಯ ಹರಿಕಾರರಾಗಿದ್ದು ಉಭಯ ಮಹನೀಯರ ಚಿಂತನೆ, ತತ್ವ, ಸಿದ್ಧಾಂತ, ಆದರ್ಶ ಮೈಗೂಡಿಸಿಕೊಂಡು ನಡೆದಲ್ಲಿ ಎಲ್ಲರಿಗೂ ಗೌರವ ನೀಡಿದಂತಾಗಲಿದೆ ಎಂದರು.

ಶೈಕ್ಷಣಿಕ ಕ್ಷೇತ್ರದ ಹಿತ ಮನಗಂಡು ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸಿದ್ದೇನೆ. ಜಾಗದ ಸಮಸ್ಯೆ ಮುಂದಿಟ್ಟು ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಗೃಹ ಮಂಡಳಿ ವತಿಯಿಂದ ಬಡವರಿಗೆೊಂದು ಸೂರು ಕಲ್ಪಿಸಲು ನಿರ್ಧರಿಸಿ ಪನ್ನಸಮುದ್ರ ಬಳಿ ಅಧಿಕಾರಿಗಳು ಜಾಗ ಗುರುತಿಸಿದ್ದರು. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲೆಯ ಮಹನೀಯರು ಎತ್ತಿನಹೊಳೆ ಯೋಜನೆಯಿಂದ ನೀರು ತರಲು ಸಾಧ್ಯವಿಲ್ಲ ಎಂದಿದ್ದರು. ರಾಜಕೀಯ ವಿರೋಧಿಗಳ ಸವಾಲನ್ನು ಸ್ವೀಕರಿಸಿ ನಾಲೆ ಮೂಲಕ ನೀರು ತರಲು ಶ್ರಮಿಸಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಎಲ್ಲರ ಆದ್ಯತೆಯಾಗಬೇಕು. ಇನ್ನಾದರೂ ಅಡ್ಡಿಪಡಿಸು ಕೆಲಸ ಮಾಡಬೇಡಿ ಎಂದು ಮನನೊಂದು ಹೇಳುತ್ತಿದ್ದೇನೆ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಮೀಸಲಿದ್ದ ಅನುದಾನ ಕಡಿತ ಮಾಡಲಾಗಿದೆ ಎಂದು ವಿರೋಧಿಗಳು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಪಂಚ ಗ್ಯಾರಂಟಿ ಕೊಡುವುದರ ಜತೆಗೆ ಹಿಂದುಳಿದವರ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ ಮಾತನಡಿದರು. ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್,ನಗರಸಭೆ ಉಪಾಧ್ಯಕ್ಷ ಮನೋಹರ್, ಪೌರಾಯುಕ್ತ ಎಚ್.ಟಿ.ಕೃಷ್ಣಮೂರ್ತಿ, ತಾಪಂ ಇಒ ಸತೀಶ್, ಡಿವೈಎಸ್‌ಪಿ ಲೋಕೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪರಶಿವಮೂರ್ತಿ,ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಯಣ್ಣ,ಮುಖಂಡರಾದ ವೆಂಕಟೇಶ್, ಎಚ್.ಟಿ.ಶಿವಮೂರ್ತಿ,ಮಂಜುಳಾಬಾಯಿ , ಗ್ರಾಪಂ ಸದಸ್ಯ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಎಪಿಎಂಸಿ ಗೇಟ್ ಮುಂಭಾಗದಿಂದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಅವರ ಭಾವಚಿತ್ರಗಳನ್ನು ಸಮಾರಂಭದ ವೇದಿಕೆವರೆಗೂ ಮರೆವಣಿಗೆ ಮಾಡಲಾಯಿತು. ಹಾಸನ ರಸ್ತೆಗೆ ಹೊಂದಿಕೊಂಡಂತಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಅಭಿಮಾನಿಗಳು ಪಟಾಕಿ ಸಿಡಿಸಿ, ಸಹಿಹಂಚಿ ಸಂಭ್ರಮಿಸಿದರು.ನೂತನವಾಗಿ ನಿರ್ಮಿಸಲಾಗಿರುವ ಬೃಹತ್ ಧ್ವಜಸ್ತಂಭ ಹಾಗೂ ಬಾವುಟವನ್ನು ಲೋಕರ್ಪಣೆ ಮಾಡಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net