

ಶಿವಮೊಗ್ಗ: ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿರುವ ಮಾನವ ಹಕ್ಕುಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಅಗತ್ಯತೆ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುಸ್ತಾಫಾ ಹುಸೇನ್ ಸೈಯದ್ ಅಜೀಜ್ ಅಭಿಪ್ರಾಯಪಟ್ಟರು.
ಜಿಪಂ ಸಭಾಂಗಣದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಪಂ ಮತ್ತು ಸ್ಥಳೀಯ ರಾಜ್ಯ ಮಾನವ ಹಕ್ಕುಗಳ ಸಮಿತಿಯಿಂದ ಗುರುವಾರ ವಿಶ್ವ ಮಾನವ ಹಕ್ಕುಗಳ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ನ್ಯಾಯ, ಸಮಾನತೆಯನ್ನು ಮಾನವ ಹಕ್ಕುಗಳಲ್ಲಿ ಸೇರ್ಪಡೆಗೊಳಿಸಲಾಗಿದೆ. ಸ್ವಯಂ ಗೌರವ ಮತ್ತು ಸ್ವಯಂ ರಕ್ಷಣೆ ಪಡೆದುಕೊಳ್ಳುವಂತೆ ಇತರರಿಗೂ ಗೌರವ ಮತ್ತು ರಕ್ಷಣೆ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮುಖ್ಯ ಎಂದು ಹೇಳಿದರು.
ಯಾವುದೇ ಕೆಲಸ ಇದ್ದರೂ ಸಮಯ ಪರಿಪಾಲನೆ ಮಾಡಬೇಕಾಗುತ್ತದೆ. ಇದರಿಂದ ನಿಮ್ಮಿಂದ ಕೆಲಸ ಬಯಸುವವರಿಗೆ ಅನುಕೂಲ ಆಗುತ್ತದೆ. ಇಲ್ಲವಾದರೆ ಅದು ಕೂಡ ಮಾನವ ಹಕ್ಕುಗಳ ಉಲ್ಲಂಘನೆ ಆಗುವ ಸಾಧ್ಯತೆ ಇರುತ್ತದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಸರಸ್ವತಿ ಮಾತನಾಡಿ, ಪ್ರಾಧಿಕಾರದ ಅಧಿನಿಯಮದ ಆಶಯದಂತೆ ದೇಶದ ಕಟ್ಟಕಡೇಯ ವ್ಯಕ್ತಿಗಳಿಗೂ ಕಾನೂನಿನಡಿ ದೊರೆಯುವ ಹಕ್ಕುಗಳ ಚ್ಯುತಿ ಆಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸ ಆಗಬೇಕು ಎಂದರು.
ಕಾನೂನಿನ ಕಾಯ್ದೆಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ. ಕೇವಲ ಜನ ಸಾಮಾನ್ಯರಿಗೆ ಮಾತ್ರವಲ್ಲದೆ ಎಲ್ಲ ಸರ್ಕಾರಿ ಇಲಾಖೆಗಳ ನೌಕರರಿಗೂ ಇದು ಅನ್ವಯವಾಗುತ್ತದೆ ಎಂದು ಹೇಳಿದರು.
ಸಾಗರದ ಎಪಿಪಿ ಸುಮಂಗಲಾ, ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕ ಸುಂದರರಾಜು, ಡಿಎಚ್ಒ ಡಾ.ರಾಜೇಶ್ ಸುರಗೀಹಳ್ಳಿ, ಎಎಸ್ಪಿ ಡಾ. ಎಚ್.ಟಿ.ಶೇಖರ್, ನಗರ ಬಿಇಒ ಪಿ.ನಾಗರಾಜು, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಎಸ್.ಶ್ರೀಧರ್, ರಾಜ್ಯ ಗುಪ್ತಚರ ವಾರ್ತೆ ಸಿಬ್ಬಂದಿಗಳಾದ ದಿವಾಕರ್ ಕಾಮತ್, ಎಂ.ಎನ್.ಶಿವುಸ್ವಾಮಿ, ಪತ್ರಕರ್ತರಾದ ಜಿ.ಸಿ.ಸೋಮಶೇಖರ್, ವಿ.ಜಗದೀಶ್, ಗುತ್ತಿಗೆದಾರ ಡಾ. ಸುರೇಶ್ ಬಾಳೇಗುಂಡಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಡಿ.ಎನ್. ಹಾಲಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು.
ಎಡಿಸಿ ಅನುರಾಧಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಿ.ಎಂ.ರೇಖಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ದೇವೇಂದ್ರಪ್ಪ, ಭಾರತೀಯ ಮಾನವ ಹಕ್ಕುಗಳ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಳ್ಳಕೆರೆ ಸಂತೋಷ್, ಮಾನವ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷ ಶ್ರೀನಿವಾಸಗೌಡ ಮತ್ತಿತರರಿದ್ದರು.