ಯುವ ಸಮೂಹಕ್ಕೆ ಸಂವಿಧಾನ ಜಾಗೃತಿ ಅಗತ್ಯ: ಬೆಂಗಳೂರು ವಿವಿ ಪ್ರಾಧ್ಯಾಪಕ ಪ್ರೊ.ಕರಿಯಣ್ಣ ಅಭಿಮತ

Constitution Reading Study Camp Mandya
Published on

ಮಂಡ್ಯ: ಸಂವಿಧಾನ ಓದು ಅಧ್ಯಯನ ಶಿಬಿರ ಮುಂಜಾಗ್ರತಾ ಕಾರ್ಯಕ್ರಮವಾಗಿದ್ದು, ಯುವ ಸಮೂಹ ಸಂವಿಧಾನದ ಜಾಗೃತಿ ವಹಿಸುವುದರಿಂದ ಸಾರ್ಥಕತೆ ಮನೋಭಾವ ಮೂಡತ್ತದೆ ಎಂದು ಬೆಂಗಳೂರು ವಿವಿ ಪ್ರಾಧ್ಯಾಪಕ ಪ್ರೊ.ಕರಿಯಣ್ಣ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸಂವಿಧಾನ ಓದು ಅಭಿಯಾನ-ಕರ್ನಾಟಕದ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರದ ‘ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಉಳಿಸುವುದು ಎಂದರೆ ಸಂವಿಧಾನ ಪುಸ್ತಕ ಹಿಡಿದುಕೊಂಡು ಮೆರವಣಿಗೆ ಹೋಗುವುದಲ್ಲ. ನಮ್ಮ ನಡುವೆ ಇರುವ ಹಕ್ಕು, ಕರ್ತವ್ಯ, ಭಾದ್ಯತೆ ಹಾಗೂ ಆದ್ಯತೆಯನ್ನು ತಿಳಿದುಕೊಳ್ಳುವುದು ಎಂದರು.

ಭಾರತದಲ್ಲಿ 145 ಕೋಟಿಗೂ ಹೆಚ್ಚು ಜನಸಂಖ್ಯೆಯಿದ್ದು, ಎಲ್ಲರೂ ಸಂವಿಧಾನದ ಆಶಯಗಳನ್ನು ಅನುಭವಿಸುತ್ತಿದ್ದೇವೆ. ದೇಶದ ಒಕ್ಕೂಟ ವ್ಯವಸ್ಥೆಯ ಮೂಲಕ ಸಂವಿಧಾನದಡಿ ಜೀವಿಸುತ್ತಿದ್ದರೂ ಬಿಕ್ಕಟ್ಟು ಹಾಗೂ ಸವಾಲುಗಳು ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿರು.

ಒಂದು ದೇಶ ಒಂದು ತೆರಿಗೆಯಡಿ ಜಿಎಸ್‌ಟಿ ಜಾರಿಗೆ ತರಲಾಯಿತು. ನಮ್ಮೂರಲ್ಲಿ ಕಡ್ಲೆಕಾಯಿ ಬೆಲೆ ಕೆಜಿಗೆ 40 ರೂ. ಆದರೆ ಗುಜರಾತ್, ರಾಜಸ್ಥಾನದಲ್ಲಿ ಬೆಳೆಯುವ ಗೋಡಂಬಿಗೆ ಸಾವಿರಾರು ರೂ. ಕೊಡಲಾಗುತ್ತಿದೆ. ನನ್ನೂರಿನ ಕಡ್ಲೆಕಾಯಿ ಬಡವರ ಬಾದಾಮಿ ಎನ್ನುತ್ತಿರುವುದರಿಂದ ಅದಕ್ಕೆ ಏಕೆ ಬೆಲೆ ಕಡಿಮೆ. ಇದರಲ್ಲಿ ಜಿಎಸ್‌ಟಿಯಿಂದ ಅರ್ಧದಷ್ಟು ಹೋದರೆ ರೈತ ಏನು ಮಾಡಬೇಕು. ಇದೆಲ್ಲವೂ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹೋಗುತ್ತಿದೆ. ಕರ್ನಾಟಕವು ಪ್ರಶ್ನೆ ಮಾಡಿ ತೆರಿಗೆ ಹಣವನ್ನು ನ್ಯಾಯಾಲಯದ ಮೂಲಕ ಹೋಗಿ ಪಡೆದುಕೊಂಡಿತು. ಇದು ಸಂವಿಧಾನ ನೀಡಿರುವ ಹಕ್ಕು ಅಲ್ಲವೇ ಎಂದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಮಾತನಾಡಿ, ಆಳುವ ವರ್ಗದ ಅಧಿಕಾರ ಮತ್ತು ಸಂಪತ್ತಿಗೆ ಯಾವೆಲ್ಲ ಅಡ್ಡಿ ಆತಂಕವಿದೆಯೋ ಅದೆಲ್ಲದರ ವಿರುದ್ಧ ನಿಂತ ಕೇರಳದ ಬಹುಮತ ಪಡೆದ ಪಕ್ಷವನ್ನು 1959ರಲ್ಲಿ ನೆಹರು ಸರ್ಕಾರ ದಾಳಿ ನಡೆಸಿ ವಜಾ ಮಾಡಿತು. ಈಗ ಕೇಂದ್ರ ಸರ್ಕಾರವೂ ಕೂಡ ಅದೇ ಮಾದರಿಯಲ್ಲಿ ಶಿಕ್ಷಣದ ಮೂಲಕವೇ ಮಧ್ಯೆಪ್ರವೇಶಿಸಿ ಎಲ್ಲ ವಿವಿಯ ರಿಮೋಟ್ ಅನ್ನು ದೆಹಲಿಯಲ್ಲಿಡಿದುಕೊಂಡು ಆಪರೇಟ್ ಮಾಡಲು ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದೆ. ಸಹಕಾರ ಸಂಘಗಳು ಕೇಂದ್ರ ಸರ್ಕಾರದ ಅಧೀನಕ್ಕೆ ಬರಬೇಕೆನ್ನುವ ಕಾಯ್ದೆಯನ್ನೂ ತಂದಿದೆ. ಇದೆಲ್ಲವನ್ನೂ ವಿರೋಧಿಸಬೇಕು ಎಂದರು.

ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳಿಗಾಗಿ ವರ್ಷಕ್ಕೆ 50 ಸಾವಿರ ಕೋಟಿ ರೂ. ಖರ್ಚು ಮಾಡಿ ಏಳು ಕೋಟಿ ಜನರಿಗೆ ಊಟ, ಬಟ್ಟೆ ನೀಡುತ್ತಿದೆ. ನಮ್ಮ ದೇಶದಲ್ಲಿ ಕಳೆದ ಹತ್ತು ವರ್ಷದಲ್ಲಿ ಕೇವಲ 100 ಕಂಪನಿಗಳ 17.4 ಲಕ್ಷ ಕೋಟಿ ರೂ ಸಾಲ ಮನ್ನಾ ಮಾಡಲಾಗಿದೆ. ಈ ಹಣವನ್ನು ಕರ್ನಾಟಕಕ್ಕೆ ಕೊಟ್ಟಿದ್ದರೆ ಎಷ್ಟು ಉಚಿತ ಯೋಜನೆಗಳನ್ನು ಮುಂದುವರಿಸಬಹುದಿತ್ತು. ಇದು ಒಕ್ಕೂಟದ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ದಾಳಿ ಎಂದು ಕಿಡಿಕಾರಿದರು.

ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಕುರಿತು ಸಂಪನ್ಮೂಲ ವ್ಯಕ್ತಿ ಬಿ.ರಾಜಶೇಖರಮೂರ್ತಿ ಹಾಗೂ ಶಿಬಿರಾರ್ಥಿಗಳ ಮುಂದಿನ ಜವಾಬ್ದಾರಿ ಕುರಿತು ಸಂವಿಧಾನ ಓದು ಅಭಿಯಾನದ ಸಂಪನ್ಮೂಲ ವ್ಯಕ್ತಿ ರಾಜು ಗೊರೂರು ವಿಚಾರ ಮಂಡಿಸಿದರು. ಸಮಾರೋಪ ಮತ್ತು ಪ್ರಶಸ್ತಿ ಪತ್ರ ವಿತರಣೆಯು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net