

ಮಂಡ್ಯ: ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಹಿರಿಯರು ದೇಶದ ಬೆಳವಣಿಗೆಗೆ ನೀಡಿದ ಸಂವಿಧಾನವನ್ನು ಅನುಸರಿಸಿ ಉಳಿಸಿಕೊಳ್ಳುವ ಜವಾಬ್ದಾರಿ ಯುವಕರ ಮೇಲಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸಂವಿಧಾನ ಓದು ಅಭಿಯಾನ-ಕರ್ನಾಟಕದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನದ ಸಂವಿಧಾನ ಓದು ಅಧ್ಯಯನ ಶಿಬಿರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಸಂವಿಧಾನ ಜಗತ್ತಿನ ಅತಿ ದೊಡ್ಡ ಸಂವಿಧಾನವಾಗಿದೆ. ಇದು ರಚನೆಯಾಗಿ ಹಲವಾರು ವರ್ಷಗಳಾದರೂ ಅನೇಕರಿಗೆ ಅದರ ರಚನೆ ಮತ್ತು ಮೂಲ ತತ್ವಗಳು ಬಗ್ಗೆ ತಿಳಿದೇ ಇಲ್ಲ ಎಂಬುದು ಯೋಚಿಸುವ ವಿಷಯವಾಗಿದೆ ಎಂದರು.
ಸಾರ್ವಜನಿಕರಿಗೆ ಉಪಯುಕ್ತವಾಗಲೆಂದು 2018ರಲ್ಲಿ ನಾನು ’ಸಂವಿಧಾನ ಓದು’ ಎಂಬ ಪುಸ್ತಕ ರಚಿಸಿದ್ದೇನೆ. ಕಳೆದ 6 ವರ್ಷದಲ್ಲಿ 2000ಕ್ಕೂ ಹೆಚ್ಚು ಉಪನ್ಯಾಸವನ್ನು ಸಂವಿಧಾನದ ಬಗ್ಗೆ ನೀಡಿದ್ದೇನೆ. ಇಷ್ಟಾದರೂ ರಾಜ್ಯದ ಒಂದಿಷ್ಟು ಜನರನ್ನು ತಲುಪಲು ವಿಫಲರಾಗಿದ್ದೇವೆ. ಜಿಲ್ಲೆಯ ಯುವ ಜನರಿಗೆ ಸಂವಿಧಾನದ ಮಹತ್ವ ಮೂಲ ತತ್ವಗಳನ್ನು ತಿಳಿಸುವುದೇ ಈ ಶಿಬಿರದ ಮೂಲ ಉದ್ದೇಶ. ಜತೆಗೆ ನಾವು ಅಭಿವೃದ್ಧಿಯತ್ತ ಸಾಗಲು ಇರುವ ಒಂದೇ ದಾರಿ ಎಂದರೆ ಅದು ಹಿರಿಯರು ಕೊಟ್ಟ ನಮ್ಮ ಸಂವಿಧಾನ ಎಂದು ಹೇಳಿದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಯುಪಿಎಸ್‌ಸಿ ಪರೀಕ್ಷೆ ಬರೆಯುವ ಸಮಯದಲ್ಲಿ ಮೊಟ್ಟ ಮೊದಲು ನಾನು ಓದಿದ್ದು ಸಂವಿಧಾನದ ಪುಸ್ತಕ. ಪ್ರಾರಂಭದಲ್ಲಿ ಕಾನೂನಿನ ಭಾಷೆ ಅರ್ಥ ಮಾಡಿಕೊಳ್ಳಲು ಕಷ್ಟವಾಯಿತು. ಆದರೆ ಅದನ್ನು ಅರ್ಥ ಮಾಡಿಕೊಂಡಾಗ ಸಮಾಜದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬ ಸಂಗತಿಯನ್ನು ಅರಿತುಕೊಂಡೆ. ನಮಗೆ ಕಷ್ಟ ಬಂದಾಗ ಯಾರೂ ನಮ್ಮ ಜತೆ ನಿಲ್ಲುವುದಿಲ್ಲ. ನಮ್ಮ ಬದುಕಿನ ಹೋರಾಟವನ್ನು ನಾವೇ ಮಾಡಬೇಕು. ಅದು ಜೀವನದ ತತ್ವ. ನಮ್ಮನ್ನು ಹೊರತು ಪಡಿಸಿ ನಮ್ಮನ್ನು ಕಾಪಾಡುವ ಶಕ್ತಿ ಯಾರಿಗಾದರೂ ಇದೆ ಎಂದರೆ ಅದು ಕೇವಲ ಭಾರತೀಯ ಸಂವಿಧಾನಕ್ಕೆ ಮಾತ್ರ ಎಂದರು.
ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾಧು, ನಗರಸಭೆ ಮಾಜಿ ಅಧ್ಯಕ್ಷ ಸಿದ್ಧರಾಜು, ರೈತ ನಾಯಕಿ ಸುನಂದಾ ಜಯರಾಂ, ದಲಿತ ಹಕ್ಕುಗಳ ಸಮಿತಿ ಮುಖಂಡ ಆರ್.ಕೃಷ್ಣ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಇತರರಿದ್ದರು. ಶಿಬಿರದಲ್ಲಿ ಸಂವಿಧಾನದ ರಚನೆ ಮತ್ತು ಮೂಲ ತತ್ವ, ಸಂವಿಧಾನ: ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತತೆ, ಸಂವಿಧಾನ ಮತ್ತು ಮಹಿಳೆ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಿದರು.