

ಶಿವಮೊಗ್ಗ: ಸಂವಿಧಾನದಡಿಯಲ್ಲಿ ನಾವೆಲ್ಲರೂ ಜೀವಮಾನ ಸಾಗಿಸುತ್ತಿದ್ದೇವೆ. ಸಂವಿಧಾನ ಬದುಕುವ, ಶಿಕ್ಷಣದ ಹಕ್ಕು ಕಲ್ಪಿಸಿದೆ ಎಂದು ಎಂಎಲ್ಸಿ ಬಲ್ಕಿಷ್ ಬಾನು ಹೇಳಿದರು.
ಅಂಬೇಡ್ಕರ್ ಭವನದಲ್ಲಿ ಶನಿವಾರ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ವಿಭಾಗ, ಪರಿಶಿಷ್ಟ ಜಾತಿ ವಿಭಾಗ, ಪರಿಶಿಷ್ಟ ಪಂಗಡ ವಿಭಾಗ, ಅಲ್ಪಸಂಖ್ಯಾತರ ವಿಭಾಗಗಳಿಂದ ಸಂವಿಧಾನ ರಕ್ಷಕ್ ಅಭಿಯಾನದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಎಸಿ ಕೊಠಡಿಯಲ್ಲಿ ಕುಳಿತು ಸಂವಿಧಾನ ರಚಿಸಿದ್ದಲ್ಲ. ಅದರ ಹಿಂದೆ ಸಾಕಷ್ಟು ಶ್ರಮವಿದೆ. ಹಾಗಾಗಿ ಸಂವಿಧಾನದ ಆಶಯಗಳನ್ನು ಪಾಲನೆ ಮಾಡಬೇಕಿದೆ ಎಂದರು.
ಇತ್ತೀಚೆಗೆ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಅಂಬೇಡ್ಕರ್ ಅವರಿಗೆ ಮಾತ್ರವಲ್ಲ. ಇಡೀ ದೇಶಕ್ಕೆ ಅವಮಾನ ಮಾಡಿದ್ದಾರೆ. ಈ ಮೂಲಕ ಬಿಜೆಪಿಯವರು ಸಂವಿಧಾನವನ್ನು ತೆಗೆಯಲು ಹೊರಟಿದ್ದಾರೆ. ಸಂವಿಧಾನದ ಉಳಿಸಬೇಕಾದರೆ ಪಕ್ಷದ ಎಲ್ಲ ಘಟಕಗಳು ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಭಿಯಾನ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಪ್ರಸ್ತಾವಿಕ ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಒಬಿಸಿ ಜಿಲ್ಲಾಧ್ಯಕ್ಷ ಇಕ್ಕೇರಿ ರಮೇಶ್, ಎಸ್‌ಇ ಘಟಕದ ಜಿಲ್ಲಾಧ್ಯಕ್ಷ ಶಿವಣ್ಣ, ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ಕೆ.ಆರ್.ಶ್ರೀಧರ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮುಜಾಮಿಲ್ ಪಾಷಾ, ಮುಖಂಡರಾದ ಎಚ್.ಸಿ.ಯೋಗೇಶ್, ಡಾ. ಶ್ರೀನಿವಾಸ್ ಕರಿಯಣ್ಣ, ವಿಜಯಕುಮಾರ್ ಸಂತೆಕಡೂರು, ಶಿವಕುಮಾರ್, ಜಿ.ಡಿ.ಮಂಜುನಾಥ, ಮಧು, ಶಂಕರಘಟ್ಟ ರಮೇಶ್, ನಾಗರಾಜ್ ಕಂಕಾರಿ, ಸುವರ್ಣ ನಾಗರಾಜ್, ಭಾರತಿ ರಾಮಕೃಷ್ಣ, ವಿಜಯಲಕ್ಷ್ಮೀ ಪಾಟೀಲ್ ಮತ್ತಿತರರಿದ್ದರು.