

ಮೈಸೂರು: ಪ್ರತಿಯೊಬ್ಬರನ್ನು ಸಮಾನವಾಗಿ ಕಾಣಬೇಕು ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ವಚನ ಸಾಹಿತ್ಯವೇ ಜಗತ್ತಿನ ಸಂವಿಧಾನ ಎಂದು ಶರಣ ಸಂಸ್ಕೃತಿ ಚಿಂತಕ ಶಂಕರ್ ದೇವನೂರು ಬಣ್ಣಿಸಿದರು.
ಅಗ್ರಹಾರದ ಶಿವ ಸನ್ನಿಧಿ ಸಮಾನ ಮನಸ್ಕ ಗೆಳೆಯರ ಬಳಗದಿಂದ ಗುರುವಾರ ಬಳಗದ ಸಭಾಂಗಣದಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ, ಅಲ್ಲಮಪ್ರಭು ಹಾಗೂ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣ ನೊಂದವರನ್ನು ಅಪ್ಪಿಕೊಂ ಡರು. ‘ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ..’ ಎಂದು ವಚನದ ಮೂಲಕ ಪ್ರತಿಯೊಬ್ಬರು ನಮ್ಮವರು ಎಂಬ ಸಂದೇಶವನ್ನು ಬಸವಣ್ಣ ಸಾರಿದರು. ಪ್ರತಿಯೊಬ್ಬರನ್ನು ನಮ್ಮವರು ಎಂದು ಬಯಸುವ ವಚನ ಸಾಹಿತ್ಯಕ್ಕೆ ಜಗತ್ತಿನ ಸಂವಿಧಾನವಾಗುವ ಅರ್ಹತೆ ಇದೆ ಎಂದು ಅಭಿಪ್ರಾಯಪಟ್ಟರು.
ಜನರು ಶರಣ ತತ್ವವನ್ನು ನಮ್ಮ ಬದುಕಿನ ಭಾಗ ಮಾಡಿಕೊಂಡು ಒಳಿತನ್ನು ಮಾಡಬೇಕು. 12ನೇ ಶತಮಾದ ಬಸವಾದಿ ಶರಣರ ಚಿಂತನೆಗಳು ಅತ್ಯಂತ ಪವಿತ್ರ ಹಾಗೂ ಪ್ರಮುಖವಾದದ್ದು. 12ನೇ ಶತಮಾನದ ವಿಚಾರಧಾರೆ ಕೇಳಿದರೆ ಮನಸ್ಸು ಪುಳಕಗೊಳ್ಳುತ್ತದೆ. ನಾವಿಂದು ಎಷ್ಟೇ ಓದಿದರೂ ನೈತಿಕವಾಗಿ ಸೋತಿದ್ದೇವೆ. ಆದರೆ 12ನೇ ಶತಮಾದವರು ಜೀವ ಪರವಾಗಿದ್ದರು. ಹಾಗಾಗಿ 12ನೇ ಶತಮಾನ ಮಹತ್ವಪೂರ್ಣವಾದದ್ದು ಎಂದು ಹೇಳಿದರು.
ವಚನ ಸಾಹಿತ್ಯ ವಿಶ್ವಕ್ಕೆ ನೀಡಿದ ಕೊಡುಗೆ ಅಪಾರ. ಕನ್ನಡ ಭಾಷೆ ಉಳಿಯಲು ವಚನ ಸಾಹಿತ್ಯ ದೊಡ್ಡ ಕೊಡುಗೆ ನೀಡಿದೆ. ಮನುಷ್ಯರನ್ನು ಮನುಷ್ಯರನ್ನಾಗಿ ರೂಪಿಸಲು ವಚನ ಸಾಹಿತ್ಯ ಅಗತ್ಯವಿದೆ. ಕಾಯಕದಿಂದ ಬಂದ ಜ್ಞಾನವೇ ಶ್ರೇಷ್ಠ ಎಂದು ಜಗತ್ತಿಗೆ ಶರಣರು ಸಾರಿದರು. ಪ್ರತಿಯೊಬ್ಬರಿಗೂ ಸ್ವಾಭಿಮಾನದಿಂದ ಬದುಕುವ ಕಲೆಯನ್ನು ಬಸವಣ್ಣ ಕಲಿಸಿದರು ಎಂದರು.
ಕಾರ್ಯಕ್ರಮದಲ್ಲಿ ಅರಿವಿನ ಮನೆ ಮಹಿಳಾ ಬಳಗದ ಅಧ್ಯಕ್ಷೆ ಲೀಲಾಂಬಿಕೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಜಿಲ್ಲಾಧ್ಯಕ್ಷ ಶಿವಮೂರ್ತಿ ಕಾನ್ಯ, ಕಾರ್ಯನಿರ್ವಾಹಕ ನಿರ್ದೇಶಕ ಆಯರಹಳ್ಳಿ ಪಿ. ವಿರೂಪಾಕ್ಷ, ನಿರ್ದೇಶಕ ದಾರೀಪುರ ಡಿ.ಚಂದ್ರಶೇಖರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಾಲಂಗಿ ಸುರೇಶ್, ಶಿವಸನ್ನಿಧಿ ಗೆಳೆಯರ ಬಳಗದ ಅಧ್ಯಕ್ಷ ಪರಮೇಶ್ ಮಾಸ್ಟರ್, ಪ್ರಮುಖರಾದ ಕಲ್ಮಳ್ಳಿ ನಟರಾಜ್ ಹಾಗೂ ಇತರರು ಇದ್ದರು.