

ಮಂಗಳೂರು: ತುರ್ತುಪರಿಸ್ಥಿತಿ ಹೇರಿಕೆ ಹಾಗೂ ತಿದ್ದುಪಡಿ ಮೂಲಕ ಸಂವಿಧಾನವನ್ನು ಬುಡಮೇಲು ಮಾಡಿರುವುದು ಇಂದಿರಾ ಗಾಂಧಿ. ಕಾಂಗ್ರೆಸ್ನಂತೆ ಸಂವಿಧಾನವನ್ನು ಬುಡಮೇಲು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಾವು ಸಂವಿಧಾನದ ರಕ್ಷಕರು, ತುರ್ತುಪರಿಸ್ಥಿತಿ ಸಂದರ್ಭ ದೇಶದಲ್ಲೇ ಅತೀ ಹೆಚ್ಚು ಅಂದರೆ 4026 ಆರ್ಸ್ಎಸ್ ಕಾರ್ಯಕರ್ತರು ಜೈಲು ಸೇರಿದ್ದು, ಕಾಂಗ್ರೆಸ್ನ ಒಬ್ಬನೂ ತುರ್ತುಪರಿಸ್ಥಿತಿ ವಿರೋಧಿಸಿ ಜೈಲು ಸೇರಿಲ್ಲ ಎಂದು ಮೈಸೂರು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ಸಂಘಟನೆ ವತಿಯಿಂದ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಮಂಗಳವಾರ ತುರ್ತು ಪರಿಸ್ಥಿತಿ- ಸಂವಿಧಾನಕ್ಕೆ ಮಾಡಿದ ಅಪಚಾರ ಎಂಬ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಕಾಂಗ್ರೆಸಿಗರು ಹೀನಮಾನವಾಗಿ ನಿಂದಿಸಿದ್ದಾರೆ, ಜರೆದಿದ್ದಾರೆ ಆದರೆ, ಇದುವರೆಗೆ ಯಾರೊಬ್ಬರನ್ನು ಜೈಲಿಗೆ ಹಾಕಿಲ್ಲ. ತುರ್ತು ಪರಿಸ್ಥಿತಿ ವೇಳೆ ಇಂದಿರಾ ಗಾಂಧಿ ಅವರನ್ನು ಪ್ರಶ್ನಿಸಿದ್ದ 350ಕ್ಕೂ ಹೆಚ್ಚು ಪತ್ರಕರ್ತರನ್ನು, ಪತ್ರಿಕಾ ಸಂಪಾದಕರನ್ನು ಜೈಲಿಗೆ ಹಾಕಲಾಗಿತ್ತು. ಪ್ರೆಸ್ ಕೌನ್ಸಿಲ್ ಆಕ್ಟ್ ತೆಗೆದು ಹಾಕಲಾಗಿದ್ದನ್ನು ಕಾಂಗ್ರೆಸ್ಗೆ ನೆನೆಪಿಸಬೇಕು. ಅಂಬೇಡ್ಕರ್ ಅವರಿಗೆ ಸಂಬಂಧಿಸಿ ಐದು ಸ್ಥಳಗಳಲ್ಲಿ ಅಭಿವೃದ್ಧಿಪಡಿಸಿರುವುದು ಮೋದಿ ಸರ್ಕಾರ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ಬಿಜೆಪಿ ಬೆಂಬಲಿತ ಸರ್ಕಾರ. ಸಂಸತ್ನಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಿದ್ದು ಮೋದಿ ಸರ್ಕಾರ. ಸಂವಿಧಾನದ 106 ತಿದ್ದುಪಡಿಗಳಲ್ಲಿ 58 ತಿದ್ದುಪಡಿ ಮಾಡಿರುವುದು ಕಾಂಗ್ರೆಸ್ ಪಕ್ಷ ಹಾಗೂ ಗಾಂಧಿ ಕುಟುಂಬ ಎಂಬುದನ್ನು ಕಾಂಗ್ರೆಸ್ಗೆ ಹೇಳಬೇಕಿದೆ ಎಂದರು.
ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿ, ತುರ್ತು ಪರಿಸ್ಥಿತಿ ಎಂಬುವುದು ದೇಶದ ಕರಾಳ ದಿನ. ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ ದಿನವದು. ಅಕ್ರಮವಾಗಿ ಚುನಾವಣೆ ಗೆದ್ದ ಇಂದಿರಾ ಗಾಂಧಿ ನ್ಯಾಯಾಲಯದ ವಿರುದ್ಧ ಹೋರಾಡಲು ಸರ್ಕಾರಿ ಯಂತ್ರವನ್ನು ಬಳಸಿಕೊಂಡಿದ್ದರು. ಅಧಿಕಾರಕ್ಕಾಗಿ ತಾನು, ಕಾಂಗ್ರೆಸ್ ಪಕ್ಷ ಯಾವ ಮಟ್ಟಕ್ಕಾದರೂ ಇಳಿಯುತ್ತದೆ ಎಂಬುದನ್ನು ನಿರೂಪಿಸಿದರು. ವೈಯಕ್ತಿಕ ಸ್ವಾರ್ಥ ಹಾಗೂ ಅಧಿಕಾರ ದಾಹಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದಿರುವುದು ಕಾಂಗ್ರೆಸ್ ಪಕ್ಷ. ತುರ್ತು ಪರಿಸ್ಥಿತಿ ಹೇರಿ ಪ್ರಧಾನಿಯ ಅಧಿಕಾರವನ್ನು ಸುಪ್ರಿಂಕೋರ್ಟ್ ತಡೆಯದಂತೆ ಸಂವಿಧಾನಕ್ಕೆ ತಿದ್ದುಪಡಿ ತಂದಿರುವುದು ಇಂದಿರಾ ಗಾಂಧಿ. ಪ್ರಶ್ನೆ, ಪ್ರತಿಭಟನೆ ಮಾಡಿದವರನ್ನು ಜೈಲಿಗಟ್ಟಲಾಗಿತ್ತು. ಸಂವಿಧಾನದ ರಕ್ಷಣೆಗೆ ಅಂದು ಹೋರಾಟ ನಡೆಸಿರುವುದು ಆರ್ಎಸ್ಎಸ್ ಕಾರ್ಯಕರ್ತರು ಎಂದರು.
ದ.ಕ. ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮೊದಲಾದವರು ಭಾಗವಹಿಸಿದ್ದರು. ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ಮಾಡಿದವರನ್ನು ಗೌರವಿಸಲಾಯಿತು.
ಕಾರ್ಯಕ್ರಮ ಸಂಚಾಲಕ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸ್ವಾಗತಿಸಿದರು. ರಾಕೇಶ್ ರೈ ಕಡೆಂಜಿ ಕಾರ್ಯಕ್ರಮ ನಿರೂಪಿಸಿದರು.
-------------------
ಇಂದಿರಾ ಗಾಂಧಿ ಅವರ ಜಾತ್ಯಾತೀತತೆಯಲ್ಲಿ ನಮಗೆ ನಂಬಿಕೆ ಇಲ್ಲ.ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಜಾತ್ಯಾತೀತ ಎಂಬ ಪದವೇ ಇರಲಿಲ್ಲ. ಜಾತ್ಯಾತೀತ ಪದವನ್ನು ಸಂವಿಧಾನದಲ್ಲಿ ಸೇರಿಸಬೇಕು ಎಂದು ಸಂವಿಧಾನ ಸಭೆಯಲ್ಲಿ ಪ್ರಸ್ತಾಪವಾದಾಗ ಅಂಬೇಡ್ಕರ್ ಅವರು ತಿರಸ್ಕರಿಸಿದ್ದರು. ಜಾತ್ಯಾತೀತತೆ ನಮ್ಮ ದೇಶದ ಸಂಸ್ಕೃತಿಯ ಭಾಗವೇ ಆಗಿದೆ ಎಂದಿದ್ದರು.
ಪ್ರತಾಪ ಸಿಂಹ, ಮೈಸೂರಿನ ಮಾಜಿ ಸಂಸದ