

ಮೈಸೂರು: ಬಸವಣ್ಣನವರ ಕಾಲದಲ್ಲಿಯೇ ಸಂಸತ್ತಿನ ರೂಪುರೇಷೆಗಳು ಪ್ರಬುದ್ಧಮಾನಕ್ಕೆ ಬಂದಿತ್ತು ಎನ್ನುವುದನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹೇಳಿದರು.
ಮೈಸೂರು ವಕೀಲರ ಸಂಘದಿಂದ ನಗರದ ನ್ಯಾಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸತ್ತಿನ ರೂಪುರೇಷೆಗಳು ಬಸವಣ್ಣನ ಕಾಲದಲ್ಲಿ ಪ್ರಬುದ್ಧಮಾನಕ್ಕೆೆ ಬಂದಿತ್ತು ಎನ್ನುವುದನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ. ಇದಕ್ಕೆೆ ಸಾಕ್ಷಿ, ಪುರಾವೆಗಳೂ ಇವೆ. 12ನೇ ಶತಮಾನದಲ್ಲಿ ಸ್ಥಾಪನೆ ಮಾಡಿದ ಅನುಭವ ಮಂಟಪ ಒಂದು ಅದ್ಭುತ ಸಂಸತ್ತಿನಂತಿತ್ತು ಎಂದು ಬಣ್ಣಿಸಿದರು.
ಬಸವಣ್ಣನವರ ಅನುಭವ ಮಂಟಪದಲ್ಲಿ ಚಮ್ಮಾರ, ಕುಂಬಾರ, ಕಮ್ಮಾರ ಸೇರಿದಂತೆ ಎಲ್ಲರಿಗೂ ಅವಕಾಶ ನೀಡಲಾಗಿತ್ತು. ಎಲ್ಲರಿಗೂ ರೊಟ್ಟಿ, ಅನ್ನ ಬಡಿಸಲಾಗುತ್ತಿತ್ತು. ಜತೆಗೆ ಚರ್ಚೆಯನ್ನೂ ಮಾಡಲಾಗುತ್ತಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಸ್ತ್ರೀಯರಿಗೆ ಬಹಳ ವಿಶೇಷ ಸ್ಥಾನವನ್ನು ನೀಡಲಾಗಿತ್ತು ಎಂದು ವಿವರಿಸಿದರು.
ಅಲ್ಲಿದ್ದ ಎಲ್ಲರೂ ಅಧ್ಯಯನಶೀಲರಾಗಿದ್ದರು. ಬಸವಣ್ಣನವರು ವೇದ-ಉಪನಿಷತ್ತುಗಳನ್ನು ವಿರೋಧಿಸಲಿಲ್ಲ. ಅಲ್ಲಿದ್ದ ಸಾರವನ್ನು ಸರಳೀಕೃತವಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಿದ್ದಾರೆ. ಕಾಯಕವೇ ಕೈಲಾಸ ಎನ್ನುವುದು ಶುಕ್ರ ನೀತಿಯಲ್ಲಿ ಬರುವ ಒಂದು ಮಂತ್ರ. ಅದನ್ನು ಸಂಸ್ಕೃತದಲ್ಲಿ ಹೇಳಿದರೇ ಯಾರಿಗೂ ಅರ್ಥವಾಗುವುದಿಲ್ಲ. ಆದರೆ ದನ ಕಾಯುವುದು, ಕಟ್ಟಿಗೆ ಕೆಲಸ ಮಾಡುವುದು, ಕುಂಬಾರಿಕೆ ಮಾಡುವುದು, ಚಮ್ಮಾರಿಕೆ ಮಾಡುವುದು ಸೇರಿದಂತೆ ಇನ್ನೂ ಹಲವು ಕೆಲಸ ಮಾಡುವುದೆಲ್ಲವೂ ಕಾಯಕವೇ ಎಂದು ಬಸವಣ್ಣ ಸರಳವಾಗಿ ತಿಳಿಸಿದ್ದಾರೆ ಎಂದು ವಿಶ್ಲೇಷಿಸಿದರು.
ಸಂವಿಧಾನದಲ್ಲಿ ಬಸವಣ್ಣನವರ ಚಿತ್ರವಿರಲಿ:
ಸಂವಿಧಾನದ ಹೊತ್ತಗೆಯಲ್ಲಿ ಜಗಜ್ಯೋತಿ ಬಸವೇಶ್ವರರ ಚಿತ್ರವನ್ನು ಸೇರ್ಪಡೆಗೊಳಿಸಬೇಕು ಎಂದು ಎಲ್ಲರೂ ಒಕ್ಕೂರಳಿನಿಂದ ಸಂಸತ್ತಿಗೆ ಮನವಿ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಸಂವಿಧಾನದ ಹೊತ್ತಗೆಯಲ್ಲಿ ಈಗಾಗಲೇ ರಾಮಾಯಣ, ಮಹಾಭಾರತ, ಟಿಪ್ಪು ಸುಲ್ತಾನ್ ಸೇರಿದಂತೆ 22 ಚಿತ್ರಗಳು ಇವೆ. ಅವುಗಳೊಂದಿಗೆ 23ನೇ ಚಿತ್ರವಾಗಿ ಯಾವುದಾದರೂ ಪುಟದಲ್ಲಿ ಬಸವಣ್ಣನವರ ಚಿತ್ರವನ್ನು ಸೇರ್ಪಡೆಗೊಳಿಸಬೇಕು ಎಂದು ಹೇಳಿದರು.
ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇದೆ. ಸಂವಿಧಾನದ ಆಶಯಕ್ಕೆೆ ಧಕ್ಕೆೆಯಾಗದಂತೆ ತಿದ್ದುಪಡಿಗಳನ್ನು ಮಾಡಬಹುದು ಎನ್ನುವ ವಿಷಯ ಸಂವಿಧಾನದಲ್ಲೇ ಇದೆ. ಅಲ್ಲದೇ ಇಲ್ಲಿವರೆಗೆ ಹಲವಾರು ತಿದ್ದುಪಡಿಗಳನ್ನು ಮಾಡಲಾಗಿದೆ. ಆದ್ದರಿಂದ ಸಂಸತ್ತು ಸಂವಿಧಾನಕ್ಕೆೆ ತಿದ್ದುಪಡಿ ಮಾಡಿ ಬಸವಣ್ಣನ ಚಿತ್ರವನ್ನು ಸೇರ್ಪಡೆಗೊಳಿಸಲು ಮುಂದಾಗಬೇಕು ಎಂದರು.
ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಮುಖ್ಯ ಭಾಷಣ ಮಾಡಿದರು. ಹೈಕೋಟ್‌ರ್ರ್ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಹೆಗ್ಡೆೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಬಿ.ಆರ್.ಚಂದ್ರಮೌಳಿ, ಎ.ಜಿ.ಸುಧೀರ್, ಎಂ.ವಿ.ಚಂದ್ರಶೇಖರ್ ಇತರರು ಇದ್ದರು.