ಅಂಬೇಡ್ಕರ್ ಆಶಯದ ಸಂವಿಧಾನ ಇನ್ನೂ ಜಾರಿಯಾಗಿಲ್ಲ: ಹಿರಿಯ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಬೇಸರ

29
Published on

ಮೈಸೂರು: ಸಂವಿಧಾನ ಜಾರಿಗೆ ಬಂದು ಇಷ್ಟು ವರ್ಷಗಳಲ್ಲಿ ಸಂವಿಧಾನ ಮೂಲ ಆಶಯವಾದ ಸ್ವಾತಂತ್ರ್ಯ, ಸಮಾನತೆ, ಭಾತೃತ್ವದ ಆಶಯಗಳನ್ನು ಮೈಗೂಡಿಸಿಕೊಳ್ಳುವಲ್ಲಿ ವಿಫಲವಾಗಿದ್ದೇವೆ ಎಂದು ಹಿರಿಯ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ಶ್ರಮಣ ಸಂಸ್ಕೃತಿ ಟ್ರಸ್ಟ್, ಬಯಲು ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ‘90ರ ನಂತರದ ಕರ್ನಾಟಕ’ ವಿಷಯ ಕುರಿತ ರಾಜ್ಯ ಮಟ್ಟದ ವಿಚಾರ ಕಮ್ಮಟದಲ್ಲಿ ಮಾತನಾಡಿದರು.
ದೇಶ ಸ್ವಾತಂತ್ರ್ಯ, ಸಮಾನತೆ, ಭಾತೃತ್ವ, ಈ ಮೂರು ಅಂಶಗಳ ತಳಹದಿಯಲ್ಲಿ ಶಿಕ್ಷಣ ರೂಪುಗೊಳ್ಳುವ ಬದಲು ಅನೈತಿಕ, ಅಸಮಾನತೆ ಧೋರಣೆಗಳಿಂದ ರೂಪುಗೊಂಡಿದೆ. ಹೀಗಾಗಿ ಮೌಲ್ಯಗಳು ಕುಸಿದಿವೆ. ಇಷ್ಟು ವರ್ಷವಾದರೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದ ಸಂವಿಧಾನ ಇಂದಿಗೂ ಜಾರಿಯಾಗಿಲ್ಲ. ಜೀವನ ವಿಧಾನವನ್ನು ಮೈಗೂಡಿಸಿಕೊಳ್ಳುವಲ್ಲಿ ವಿಫಲವಾಗಿದ್ದೇವೆ. ಚಳವಳಿಗಳು, ಶೈಕ್ಷಣಿಕ ಹೋರಾಟಗಳು ಸಂಪೂರ್ಣ ಕೊನೆಯ ಹಂತಕ್ಕೆ ತಲುಪಿವೆ ಎಂದರು.
2024ರ ನಂತರದ ಭಾರತ ಭೀಕರವಾಗಿರಲಿದೆ. ಹೀಗಾಗಿ ಪೂರ್ವಿಕರ ದಾರಿಗಳ ಪ್ರಯೋಗಗಳನ್ನು ಮರು ವಾಖ್ಯಾನಿಸಿ ಸಾಂಸ್ಕೃತಿಕ ಯುದ್ಧಕ್ಕೆ ಸಿದ್ಧವಾಗಬೇಕಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಪಹರಿಸಲಾಗುತ್ತಿದ್ದು, ಇಂದಿನ ಮಧ್ಯಮ ವರ್ಗದ ಭದ್ರತೆಯ ಭಾರತ ಮುಂದಿನ ದಿನಗಳಲ್ಲಿ ಅಭದ್ರತೆಗೆ ಸಿಲುಕಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಚನ ಚಳವಳಿ, ಧರೆಗೆ ದೊಡ್ಡವರು, ಮಾದಪ್ಪ ಅನೇಕ ತತ್ವ ಪದಗಾರರು, ಸಮಾಜ ಸುಧಾರಕರು ಯಾವ ತಾರತಮ್ಯವನ್ನು ವಿರೋಧಿಸಿ ನಿಂತರೋ ಅಲ್ಲಿಯೇ ನಾವು ಪರಿಹಾರಗಳನ್ನು ಹುಡುಕಬೇಕು. ಅವರ ಆಶಯಗಳನ್ನು ಆಯುಧಗಳನ್ನಾಗಿಸಿ ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಪ್ರಚಾರ ಪಡಿಸಿ ಆ ಮೂಲಕ ಸಂವಿಧಾನವನ್ನು ಸುಂದರಗೊಳಿಸಿ ಬಾಬಾ ಸಾಹೇಬರ ನಿಜವಾದ ಪ್ರಜಾಪ್ರಭುತ್ವನ್ನು ಜಾರಿಗೆ ತರಬೇಕಿದೆ. ಇದಕ್ಕಾಗಿ ಹೊಸ ಪ್ರಣಾಳಿಕೆ ಅಗತ್ಯವಿದೆ. ಈಗ ದಿಕ್ಕು ತೋರಿಸುವವರು ಯಾರೂ ಇಲ್ಲ. ನಾವೇ ದಿಕ್ಕು ಕಂಡುಕೊಳ್ಳಬೇಕು ಎಂದರು.
ಹಿರಿಯ ಸಾಹಿತಿ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಇಂದು ಕಪ್ಪು ಹಣ ಪ್ರಜಾಪ್ರಭುತ್ವವನ್ನು ನಿಯಂತ್ರಿಸುತ್ತಿದೆ. ಭ್ರಷ್ಟಾಚಾರಕ್ಕೆ ಸಾರ್ವಜನಿಕರ ಸಮ್ಮತಿ ಸಿಕ್ಕಿದೆ. ಸ್ವಾತಂತ್ರ್ಯದ ನಂತರ ದೇಶದಲ್ಲಿ ಸಂರಕ್ಷಣೆ ಮಾಡಿದ್ದ ಮೌಲ್ಯಗಳು ಕಳೆದ 40 ವರ್ಷಗಳಲ್ಲಿ ತಲೆಕೆಳಾಗಿವೆ. ಜಾತಿ ನಡುವೆ ಅಸಹನೆ ದಿನೇದಿನೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಆಹಾರ ಸಂಸ್ಕೃತಿ, ಅಭಿವ್ಯಕ್ತಿ ಸ್ವಾತಂತ್ರ್ಯ, ವೈವಾಹಿಕ ಸ್ವಾತಂತ್ರ್ಯ, ಧಾರ್ಮಿಕ ನಂಬಿಕೆಯ ಸ್ವಾತಂತ್ರೃಗಳು ದೊಡ್ಡ ಬಿಕ್ಕಟ್ಟಿಗೆ ಸಿಲುಕಿವೆ. ಮತೀವಾದ ಎಲ್ಲ ಕಡೆ ವಿಜೃಂಭಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಣಕಾಸು ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ. ಅತೀಕ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಹತ್ವ ನೀಡದಿರುವುದೇ ಇಂದು ಈ ಕ್ಷೇತ್ರದ ಹಿನ್ನಡೆಗೆ ಕಾರಣವಾಗಿದೆ. ಸಂವಿಧಾನದಲ್ಲಿ 1950ರ ನಂತರ ದೇಶದಲ್ಲಿ 10 ವರ್ಷದ ಅವಧಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸುತ್ತೇವೆ ಎಂದಿದ್ದೇವೆ. ಆದರೆ, ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಲಿಲ್ಲ. ಇದರಿಂದ ಅನಕ್ಷರಸ್ಥರ ಪ್ರಮಾಣ ಹೆಚ್ಚಾಗಿದೆ ಎಂದರು.
ಜಪಾನಿನ ವಸಾಹತುಶಾಹಿಗೆ ಒಳಗಾಗಿದ್ದ ಸೌತ್-ಈಸ್ಟ್ ದೇಶಗಳನ್ನು ಗಮನಿಸಿದಾಗ ಅಲ್ಲಿನ ಪ್ರಗತಿಯನ್ನು ಕಾಣಬಹುದು. ಕೊರಿಯಾ, ಥೈವಾನ್, ಥೈಲೆಂಡ್, ವಿಯೆಟ್ನಾಂ, ಶ್ರೀಲಂಕಾ ಹಾಗೂ ಇನ್ನಿತರ ದೇಶಗಳಿಗೆ 1950-60ರ ದಶಕದಲ್ಲಿ ಸ್ವಾತಂತ್ರ್ಯ ಲಭಿಸಿತು. ಸ್ವಾತಂತ್ರ್ಯ ದೊರೆತ ನಂತರ ಈ ದೇಶಗಳು ಸಾರ್ವಜನಿಕ ನೀತಿಯನ್ನು ರೂಪಿಸಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಹತ್ವ ನೀಡಿದವು. ಸಾರ್ವತ್ರಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಿದವು. ಇದರಿಂದ ಈ ದೇಶಗಳಲ್ಲಿ ಅಕ್ಷರಸ್ಥರ ಪ್ರಮಾಣ ಶೇ.100ರಷ್ಟಿದೆ. ಆರೋಗ್ಯವಂತ ಸಂಖ್ಯೆಯೂ ಹೆಚ್ಚಾಗಿದೆ ಎಂದು ತಿಳಿಸಿದರು.
ಬಯಲು ಬಳಗದ ರವಿಕುಮಾರ್ ಬಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ನಿರ್ದೇಶಕಿ ಕೆ.ಲಕ್ಷ್ಮೀಪ್ರಿಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net