

ಮಂಗಳೂರು: ಭಾರತೀಯ ಸಂವಿಧಾನವು ಸರ್ವೋನ್ನತಿಯ ಪ್ರತೀಕವಾಗಿದೆ ಎಂದು ನವ ದೆಹಲಿ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯುದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಲೆರಿಯನ್ ರೋಡ್ರಿಗಾಸ್ ಹೇಳಿದರು.
ಭಾರತದಲ್ಲಿ ಸಂವಿಧಾನ ಅಂಗೀಕರಿಸಿದ 75ನೇ ವರ್ಷಾಚರಣೆಯ ಅಂಗವಾಗಿ ಹಿಂದು ವಿದ್ಯಾದಾಯಿನೀ ಸಂಘ ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಮಾನವ ಹಕ್ಕುಗಳ ವೇದಿಕೆ, ಮಾನವಿಕ ವಿಭಾಗ, ಗ್ರಾಹಕ ಹಕ್ಕುಗಳು ಮತ್ತು ಮಹಿಳಾ ವೇದಿಕೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಜಸ್ಟಿಸ್ ಸುರೇಶ್ ಹೊಸಬೆಟ್ಟು ದತ್ತಿನಿಧಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ವಿಷಯದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಎಪ್ಪತ್ತೈದು ವರ್ಷ ತುಂಬಿದ ಭಾರತದ ಸಂವಿಧಾನವು ದೇಶದ ನಾಡಿಮಿಡಿತವಾಗಿ ಮುನ್ನಡೆಯುತ್ತಿದೆ. ಸಮಗ್ರ ಭಾರತದ ಸರ್ವೋನ್ನತಿಯ ಪ್ರತೀಕವಾದ ಭಾರತದ ಸಂವಿಧಾನವು ಪ್ರಜಾವರ್ಗದ ನೆಮ್ಮದಿಯ ಸಂಘಟಿತ ಬದುಕಿನ ಆಶಯದ ಭದ್ರನೆಲೆಯಾಗಿ ರೂಪುಗೊಂಡಿದೆ. ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ನಿಖರ ವ್ಯಾಖ್ಯಾನವನ್ನು ನೀಡಿದ ಭಾರತದ ಸಂವಿಧಾನವನ್ನು ವಿದ್ಯಾರ್ಥಿಗಳು ಅಭ್ಯಾಸಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ. ಎಪ್ಪತ್ತು ವರ್ಷಗಳ ಸಂವಿಧಾನಿಕ ಭಾರತದಲ್ಲಿ ಯುವ ಸಮುದಾಯಗಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಮಾನವ ಹಕ್ಕುಗಳು ಮತ್ತು ಸಾಂವಿಧಾನಿಕ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಹೆಚ್. ಜಯಚಂದ್ರ ಹತ್ವಾರ್, ಕಾಲೇಜಿನ ಆಡಳಿತಾತ್ಮಕ ನಿರ್ದೆಶಕ ಪ್ರೊ. ಗೋಪಾಲ ಎಂ. ಗೋಖಲೆ, ಕಾರ್ಯಕ್ರಮ ಸಂಯೋಜಕಿ ಡಾ. ಆಶಾಲತಾ ಪಿ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯ ಪ್ರವೀಣ್ ಕೆ., ಪ್ರಾಂಶುಪಾಲೆ ಲಕ್ಷ್ಮೀ ಪಿ, ಮಹಿಳಾ ವೇದಿಕೆಯ ಸಂಯೋಜಕಿ ಶ್ರೀದೇವಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅಕ್ಷತಾ ವಿ. ಮತ್ತು ಡಾ. ಭಾಗ್ಯಲಕ್ಷ್ಮೀ ಎಂ., ಸ್ಟಾಫ್ ಅಸೋಸಿಯೇನ್‌ನ ಕಾರ್ಯದರ್ಶಿ ಗೀತಾ ಕೆ., ಇತಿಹಾಸ ಉಪನ್ಯಾಸಕಿ ಡಾ. ವಿಜಯಲಕ್ಷ್ಮಿ, ಗೋವಿಂದ ದಾಸ ಕಾಲೇಜು ಅಲುಮ್ನಿ ಅಸೋಸಿಯೇಶನ್‌ನ ಸದಸ್ಯೆ ಗೀತಾ ಸುರತ್ಕಲ್, ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಶುಭ, ಲೀಲಾವತಿ, ಶೈಲಜಾ ಉಪಸ್ಥಿತರಿದ್ದರು.
ಭಾರತದ ಸಂವಿಧಾನ ಪೀಠಿಕೆಯನ್ನು ಪಠಿಸಿ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ. ಸ್ವಾಗತಿಸಿದರು. ಉಪನ್ಯಾಸಕ ಡಾ. ಸಂತೋಷ್ ಆಳ್ವ ನಿರೂಪಿಸಿದರು. ಗ್ರಾಹಕ ವೇದಿಕೆಯ ಸಂಯೋಜಕಿ ದಯಾ ಸುವರ್ಣ ವಂದಿಸಿದರು.
-----------------
ರಾಜ್ಯ ಮಟ್ಟದ ವಿಚಾರ ಸಂಕಿರಣ
ಪ್ರಥಮ ಗೋಷ್ಠಿಯಲ್ಲಿ ಭಾರತದ ಮಂಗಳಮುಖಿಯರ ಹಕ್ಕುಗಳು- ವಿಶೇಷ ಉಲ್ಲೇಖದೊಂದಿಗೆ ಮಾನವ ಹಕ್ಕುಗಳು ಮತ್ತು ಲಿಂಗತ್ವ ನ್ಯಾಯದ ಕುರಿತು ಸಂಶೋಧಕಿ ಡಾ. ರೇಷ್ಮಾ ಉಲ್ಲಾಳ್ ಪ್ರಬಂಧ ಮಂಡನೆ ಮಾಡಿದರು. ಮಂಗಳಮುಖಿ ಸಾಮಾಜಿಕ ಕಾರ್ಯಕರ್ತೆ ಡಾ. ಅರುಂಧತಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಉಪನ್ಯಾಸಕಿ ಡಾ. ಸುಧಾ ಯು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ದ್ವಿತೀಯ ಗೋಷ್ಠಿಯಲ್ಲಿ ವಿದ್ಯಾರ್ಥಿನಿಯರಾದ ಸ್ಮಿತಾ ಸಿ. ಮತ್ತು ಜುವೇರಿಯಾ ನಾಸಿರ ಭಾರತದಲ್ಲಿ ಮಕ್ಕಳ ಹಕ್ಕುಗಳು ಮತ್ತು ಸವಾಲುಗಳ ಕುರಿತು, ಹಿತಾ ಉಮೇಶ್ ಭಾರತದಲ್ಲಿ ಮಹಿಳೆಯರ ಹಕ್ಕುಗಳು : ಸಮಸ್ಯೆಗಳು ಮತ್ತು ಸಾಧ್ಯತೆಗಳ ಕುರಿತು, ಸುಶ್ಮಿತಾ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಸಾಮಾಜಿನ ನ್ಯಾಯದ ಕುರಿತು, ವರ್ಷಿತಾ ಎಸ್. ಮಾನವ ಹಕ್ಕುಗಳು ಮತ್ತು ಪರಿಸರದ ಕುರಿತು ಪ್ರಬಂಧಗಳನ್ನು ಮಂಡಿಸಿದರು. ಶಮಾ ಫರ್ಹಾನ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.