

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯರಿಗೆ ಸಂವಿಧಾನ ಅಮೂಲ್ಯವಾಗಿದ್ದು, ದೇಶದ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಸಂವಿಧಾನವೇ ಮೂಲ ಎಂದು ಜಿಲ್ಲಾ ನ್ಯಾಯಾಲಯದ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಹೇಳಿದರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗದ ಫುಲೆ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಅವರು ಮಾತನಾಡಿದರು.
ಯಾವುದೇ ಜಾತಿ, ಧರ್ಮದಿಂದ ದೇಶ ಕಟ್ಟಲು ಅಸಾಧ್ಯ. ಸಂವಿಧಾನದಿಂದ ಮಾತ್ರ ದೇಶ ಕಟ್ಟಲು ಸಾಧ್ಯ. ಭಾರತದ ಸಂವಿಧಾನ ಓದಿ ಅರ್ಥ ಮಾಡಿಕೊಂಡಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆ ತರಬಹುದು. ಪ್ರತಿ ಪ್ರಜೆಗೂ ಒಂದೇ ಕಾನೂನು ವ್ಯವಸ್ಥೆಯಿದೆ. ಜಗತ್ತಿನ ಶ್ರೇಷ್ಠ ಸಂವಿಧಾನದಲ್ಲಿ ಭಾರತದ ಸಂವಿಧಾನವೇ ಮೊದಲಿನ ಸಾಲಿನಲ್ಲಿದೆ. ಸಂವಿಧಾನವನ್ನು ಆಯಾ ಕಾಲ ಘಟ್ಟಕ್ಕೆ ಮಾತ್ರ ತಿದ್ದುಪಡಿ ಮಾಡಬಹುದೇ ವಿನಃ ತೆಗೆದುಹಾಕಲು ಸಾಧ್ಯವಿಲ್ಲ ಎಂದರು.
ಅಂಬೇಡ್ಕರ್ ದಲಿತ, ಶೋಷಿತರಿಗೆ ಮಾತ್ರ ಸಂವಿಧಾನ ರಚಿಸಿಲ್ಲ. ದೇಶದ ಕಟ್ಟ ಕಡೇ ವ್ಯಕ್ತಿಗೂ ನ್ಯಾಯ ಸಿಗುವಂತೆ ಸಂವಿಧಾನ ರಚಿಸಿದ್ದಾರೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 1949ರ ನ. 26ರಂದು ಸಂವಿಧಾನ ಅಳವಡಿಸಿಕೊಳ್ಳಲಾಯಿತು. ಇದರ ಅಂಗವಾಗಿ ನಾವು ಇಂದು ಸಂವಿಧಾನ ದಿನ ಆಚರಿಸುತ್ತಿದ್ದೇವೆ ಎಂದರು.
ಡಾ. ನಿಜಲಿಂಗಪ್ಪ ಮಟ್ಟಿಹಾಳ ಅಧ್ಯಕ್ಷತೆ ವಹಿಸಿದ್ದರು. ಡಾ.ಸಿ.ಕೃಷ್ಣಮೂರ್ತಿ, ಡಾ. ಸದಾಶಿವ ಮರ್ಜಿ, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಇತರರು ಇದ್ದರು.