

ವಿಜಯಪುರ: ವಿಶ್ವದ ಸರ್ವಶ್ರೇಷ್ಠ ಸಂವಿಧಾನ ರಚಿಸಿ ಪ್ರತಿಯೊಬ್ಬ ಭಾರತೀಯನಿಗೆ ಕೊಡುಗೆ ನೀಡುವ ಮೂಲಕ ಸದೃಢ ಭಾರತ ನಿರ್ಮಾಣಕ್ಕಾಗಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಭದ್ರ ಬುನಾದಿ ಹಾಕಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮುಂಭಾಗದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇಂದು ವಿಶ್ವದಾದ್ಯಂತ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಅತ್ಯಂತ ಸಂಭ್ರಮ-ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಐತಿಹಾಸಿಕ ವಿಜಯಪುರದಲ್ಲಿಯೂ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು, ಜೀವನ ಸಾಧನೆ ಸಮಗ್ರ ಚಿತ್ರಣ ಕಟ್ಟಿಕೊಡುವ ಹಾಗೂ ವಿಚಾರ-ಸಂದೇಶಗಳ ಮಾಹಿತಿಯುಳ್ಳ, ನವೀಕರಣಗೊಂಡ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಯಂತಿ ನಡೆಯುತ್ತಿರುವುದು ವಿಶೇಷವಾಗಿದೆ ಎಂದರು.
ಸಮಾಜದಲ್ಲಿ ಸಮಾನತೆಯ ಹಕ್ಕಿನೊಂದಿಗೆ ರಾಷ್ಟ್ರದ ಏಳಿಗೆಗಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಮನುಷ್ಯನ ದೇಹದಲ್ಲಿ ಹೃದಯ ಎಷ್ಟು ಮುಖ್ಯವೋ ಅಷ್ಟೇ ಭಾರತಕ್ಕೆ ಸಂವಿಧಾನ ಮುಖ್ಯವಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಕೇವಲ ಒಂದು ಜಾತಿ, ಸಮುದಾಯಕ್ಕೆ ಸೀಮಿತಗೊಳಿಸಬಾರದು. ಜಾತಿ, ಮತ ಪಂಥಗಳನ್ನು ಮೀರಿ ನಿಂತ ಮೇಧಾವಿಗಳಾಗಿರುವ ಅವರು, ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ, ಅಭಿವ್ಯಕ್ತಿ ಮತ್ತು ಗೌರವಯುತವಾಗಿ ಹಾಗೂ ಘನತೆಯಿಂದ ಜೀವನ ನಡೆಸಲು ಸಂವಿಧಾನ ಒದಗಿಸಿಕೊಟಿದ್ದು, ಸಂವಿಧಾನದ ಆಶಯದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಈ ದೇಶಕ್ಕೆ ನೀಡಿದ ಸ್ವಾತಂತ್ರ್ಯ, ಸಮಾನತೆ, ಭಾತೃತ್ವವನ್ನೊಳಗೊಂಡಿರುವ ಸಂವಿಧಾನ ಎಲ್ಲ ವರ್ಗದ ಅಭ್ಯುದಯ, ಶೈಕ್ಷಣಿಕ, ಸಾಮಾಜಿಕ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ಚಿಂತಕಿ ಕೆ.ನೀಲಾ ಉಪನ್ಯಾಸ ನೀಡುತ್ತ, ನಿಜವಾದ ಆರ್ಥಿಕ ಅಭಿವೃದ್ಧಿ ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳಲ್ಲಿ ಜೊತೆಯಾಗಿ ಕಾಣಸಿಗುತ್ತವೆ. ಬಸವಣ್ಣನವರು ಬಹು ದೊಡ್ಡ ಆರ್ಥಿಕ ತಜ್ಞರಾಗಿದ್ದರು. ಕಾಯಕದ ಮಹತ್ವ ಕುರಿತು ಉದಾತ್ತ ಚಿಂತನೆಗಳನ್ನು ಹೊಂದಿದ್ದರು. ಜನರು ಘನತೆಯಿಂದ ಬದುಕಲು ಆರ್ಥಿಕ ಸ್ವಾತಂತ್ರೃ ಇರಬೇಕು ಎಂಬುದು ಅಂಬೇಡ್ಕರ್ ಅವರ ಉದಾತ್ತ ಚಿಂತನೆಯಾಗಿತ್ತು. ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಅಂಬೇಡ್ಕರ್, ಸ್ತ್ರೀ ಸಬಲೀಕರಣಕ್ಕಾಗಿ ಹೊಂದಿದ ವಿಚಾರಗಳನ್ನು ನಮ್ಮ ಸಂವಿಧಾನದಲ್ಲಿ ಕಾಣಬಹುದಾಗಿದೆ ಎಂದು ಅವರು ಹೇಳಿದರು.
ಬಸವತತ್ವ ಪ್ರಚಾರಕ ಡಾ. ಜೆ.ಎಸ್. ಪಾಟೀಲ ಅವರು ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನ ರಚನೆ ಕುರಿತು ಉಪನ್ಯಾಸ ನೀಡಿದರು.
ವಿವಿಧ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರಮಾಣ ಪತ್ರ ನೀಡಲಾಯಿತು.
ನವೀಕರಣಗೊಂಡ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿನ ಗ್ರಂಥಾಲಯ ಉದ್ಘಾಟನೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಕುರಿತ ಸಂದೇಶ ಸಾರುವ ಛಾಯಾಚಿತ್ರಗಳನ್ನು ಅನಾವರಣಗೊಳಿಸಲಾಯಿತು. ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಲಾಯಿತು.
ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಾಜಿ ಶಾಸಕ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮೇಲುಸ್ತುವಾರಿ ಸಮಿತಿ ಸದಸ್ಯ ರಾಜು ಆಲಗೂರ, ಜಿಪಂ ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ ಮತ್ತಿತರರಿದ್ದರು.