

ಭಾರತ ದೇಶವನ್ನು ಅರ್ಥ ಮಾಡಿಕೊಳ್ಳದೆ ಸಂವಿಧಾನವನ್ನು ನೀವು ಯಾವ ಭಾಷೆಯಲ್ಲಿ ಓದಿದರೂ ಅರ್ಥವಾಗುವುದಿಲ್ಲ ಎಂದು ಹೈಕೋಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಅಭಿಪ್ರಾಯಪಟ್ಟರು.
ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ಎಸ್‌ಸಿ/ಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಐಎಫ್‌ಟಿಟಿಸಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಧರ್ಮಕ್ಕೂ ಒಂದು ಗ್ರಂಥವಿರುತ್ತದೆ. ಆದರೆ ಎಲ್ಲ ಭಾರತೀಯರಿಗೂ ಇರುವುದು ಸಂವಿಧಾನ ಗ್ರಂಥ ಮಾತ್ರ. ಅದನ್ನು ಓದಿ, ಅರ್ಥ ಮಾಡಿಕೊಂಡು ಅದರಂತೆಯೇ ನಡೆದರೆ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸಂವಿಧಾನದ ಮಾರ್ಗದಲ್ಲಿ ಬದುಕಿದರೆ ನಾವು ಬೆಳೆಯುತ್ತೇವೆ. ದೇಶವೂ ಬೆಳೆಯುತ್ತದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ದೇಶವು ಹರಿದು ಹಂಚಿಹೋಗಿತ್ತು. ಶಿಕ್ಷಣ, ಕೃಷಿ ಸೇರಿದಂತೆ ಎಲ್ಲ ವರ್ಗಗಳಲ್ಲಿಯೂ ಅಭಿವೃದ್ಧಿ ಕಾಣದ ಪರಿಸ್ಥಿತಿಗಳಿದ್ದವು. ಸಂವಿಧಾನ ರಚನೆಯಾದ ಬಳಿಕ ಕೃಷಿ ಕ್ಷೇತ್ರದ ಜತೆಗೆ ಕೈಗಾರಿಕೆ, ಅನಕ್ಷರತೆಯ ಬದಲಿಗೆ ಅಕ್ಷರತೆ, ಮೂಢನಂಬಿಕೆ ಬದಲಿಗೆ ವೈಜ್ಞಾನಿಕತೆ ಸೇರಿದಂತೆ ಸಾಕಷ್ಟು ಬದಲಾವಣೆಗಳನ್ನು ಕಾಣುವಂತಾಯಿತು. ಸಂವಿಧಾನದಲ್ಲಿ ಸಮಾನತೆ ನೀಡಿರುವುದರಿಂದಲೇ ದಲಿತ ಸಮುದಾಯ ಉಪ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಂತ್ರಿ, ಎಂಎಲ್‌ಎ, ಎಂಪಿ, ಐಎಎಸ್, ಐಪಿಎಸ್ ಸೇರಿದಂತೆ ಎಲ್ಲ ಪದವಿ ಪಡೆಯಲು ಸಾಧ್ಯವಾಗಿದೆ ಎಂದರು.
ಈ ಹಿಂದೆ ಅನೇಕರು ಜಾತಿ ವ್ಯವಸ್ಥೆಯಲ್ಲಿ ಸಿಲುಕಿ ಅದೇ ಜಾತಿಯ ಕಸುಬುಗಳಿಗೆ ಸೀಮಿತವಾಗಬೇಕಿತ್ತು. ಆದರೆ ಇಂದು ಯಾರು ಯಾವ ಕಸುಬುಗಳನ್ನೂ ಬೇಕಾದರೂ ಮಾಡಬಹುದಾಗಿದೆ. ಆದರೆ ಜಾತಿ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಇಂತಹ ಅನೇಕ ಬದಲಾವಣೆಗಳು ಸಂವಿಧಾನದಿಂದಾಗಿದೆ. ಹೀಗಾಗಿ ಸಂವಿಧಾನದಿಂದಲೂ ಹಲವಾರು ಅಭಿವೃದ್ಧಿ ಕೆಲಸಗಳಾಗಿವೆ ಎಂದರೆ ತಪ್ಪಾಗಲಾರದು.
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸುವುದು ಖಂಡನೀಯ. ಅವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಎಲ್ಲರಿಗೂ ಬೇಕಾಗಿರುವ ಸಂವಿಧಾನ ರಚಿಸಿದ್ದು, ದಲಿತರಿಗೆ ಮಾತ್ರ ಸೀಮಿತವಾಗಿಲ್ಲ. ವಿಶ್ವವೇ ಮೆಚ್ಚುವಂತಹ ಸಂವಿಧಾನ ಕೊಟ್ಟ ಅವರು, ಸಾವಿರಾರು ವರ್ಷಗಳಿಂದ ತಾಂಡವಾಡುತ್ತಿದ್ದ ಮೌಢ್ಯತೆ, ಕಂದಾಚಾರಗಳನ್ನು ಹೋಗಲಾಡಿಸಿದ್ದಾರೆ. ಇಡೀ ಜೀವನವನ್ನೇ ಸಮಾಜದ ಉದ್ಧಾರಕ್ಕಾಗಿ ತ್ಯಾಗ ಮಾಡಿದರು. ಜೀವನ ಪೂರ್ತಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮಹಿಳೆಯರನ್ನು, ಕಾರ್ಮಿಕರನ್ನು, ಹಿಂದುಳಿದವರನ್ನು ಮೇಲೆತ್ತಲು ಪ್ರಯತ್ನಿಸಿದರು ಎಂದರು.
ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಗಳ ರೀತಿ ನಡೆಸಿಕೊಳ್ಳಲಾಗುತ್ತಿತ್ತು. ಮಹಿಳೆಯರ ಅನ್ಯಾಯಗಳನ್ನು ಸರಿಪಡಿಸಲು ಹಿಂದು ಕೋಡ್ ಬಿಲ್ ಮಂಡಿಸಿದ್ದರು ಅಂಬೇಡ್ಕರ್. ಆದರೆ, ಅಂದು ಅವರ ಪಕ್ಷ ಅಧಿಕಾರದಲ್ಲಿ ಇದ್ದರೂ ಬಿಲ್ ಪಾಸಾಗಲಿಲ್ಲ. ಹಾಗಾಗಿ, ನೊಂದು ಅವರು ರಾಜೀನಾಮೆ ನೀಡಿ ಹೊರ ಬಂದರು. ಮದುವೆ, ಆಸ್ತಿ ಹಕ್ಕು, ಸಾಮಾಜಿಕ ಭದ್ರತೆ ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದ ಅನೇಕ ಅಂಶಗಳು ಬಿಲ್‌ನಲ್ಲಿ ಇತ್ತು. ಈಗ ಬಿಲ್‌ನಲ್ಲಿದ್ದ ಎಲ್ಲ ಅಂಶಗಳು ಜಾರಿಯಾಗಿವೆ. ಇದರ ಫಲವಾಗಿ ಮಹಿಳೆಯರೂ ಎಲ್ಲ ಕ್ಷೇತ್ರಗಳಿಗೂ ಕಾಲಿಟ್ಟಿದ್ದು, ಜೀವನದಲ್ಲಿಯೂ ಬದಲಾವಣೆಯನ್ನು ಕಂಡಿದ್ದಾರೆ ಎಂದರು.
ವೃತ್ತ, ಬಡಾವಣೆ, ರಸ್ತೆಗಳಿಗೆ ಅಂಬೇಡ್ಕರ್ ಹೆಸರನ್ನು ನಾಮಕರಣ ಮಾಡಿದರೆ ಸಾಲದು. ಅಂಬೇಡ್ಕರ್ ಅಮಲು ಬೆಳೆಸಿಕೊಳ್ಳುವ ಬದಲು ಅಂಬೇಡ್ಕರ್ ಅರಿವು ಮೂಡಿಸಿಕೊಳ್ಳಬೇಕು ಎಂದರು.