

ಸಾಲಿಗ್ರಾಮ: ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಿಂದ ತಳ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರರು ರಾಜಕೀಯ ಹಾಗೂ ಶೈಕ್ಷಣಿಕವಾಗಿ ಉನ್ನತ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.
ಸಾಲಿಗ್ರಾಮ ತಾಲೂಕಿನ ಎರೆಮನಗನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದಿಂದ ಗುರುವಾರ ಆಯೋಜಿಸಿದ್ದ 134ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರು ಆರ್ಥಿಕ ಅಭಿವೃದ್ಧಿ ಹೊಂದಬೇಕಾದರೆ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಅದಕ್ಕಾಗಿ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ನಿಗಮ, ವಾಲ್ಮೀಕಿ ನಿಗಮ, ಹಿಂದುಳಿದ ವರ್ಗಗಳ ನಿಗಮ, ಅಲ್ಪಸಂಖ್ಯಾತರ ನಿಗಮ ಸೇರಿದಂತೆ ಇನ್ನಿತರ ಇಲಾಖೆಗಳಿಂದ ಸಾಕಷ್ಟು ಯೋಜನೆಗಳನ್ನು ನೀಡಿದೆ. ಇದನ್ನು ಪ್ರತಿಯೊಬ್ಬರೂ ಇದನ್ನುಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾನತೆಗಾಗಿ ಸಾಕಷ್ಟು ಹೋರಾಟ ಮತ್ತು ಸಂಘಟನೆ ಮಾಡುವ ಮೂಲಕ ಬಿ.ಆರ್.ಅಂಬೇಡ್ಕರ್ ಅವರು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಮನೆಯಲ್ಲಿ ಬಹಳ ಕಷ್ಟದ ಜೀವನ ಇದ್ದರೂ ಶಿಕ್ಷಣವನ್ನು ಕೈಬಿಡದೆ ಅನೇಕ ಪದವಿಗಳನ್ನು ಪಡೆದು ವಿಶ್ವಜ್ಞಾನಿ ಎಂದೇ ಹೆಸರು ಮಾಡುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ. ಅವರು ನಡೆದು ಬಂದ ಹಾದಿಗಳನ್ನು ಒಮ್ಮೆ ಓದುವ ಮೂಲಕ ಅರ್ಥ ಮಾಡಿಕೊಂಡರೆ ನಮ್ಮ ಪದವಿಗಳು ಯಾವುದಕ್ಕೂ ಸಮವಲ್ಲ. ಹಾಗಾಗಿ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ಉನ್ನತ ಸ್ಥಾನಮಾನದಲ್ಲಿರುವ ವ್ಯಕ್ತಿಗಳು, ಅಹಂಕಾರ ಪಡೆದೆ ಎಲ್ಲ ವರ್ಗದ ಜನರನ್ನು ಪ್ರೀತಿಯಿಂದ ಕಾಣಬೇಕು. ಆ ಮೂಲಕ ಇದ್ದಷ್ಟು ದಿನ ಎಲ್ಲ ಜನರ ಹೃದಯ ಗೆಲ್ಲಬೇಕು ಎಂದು ಕಿವಿಮಾತು ಹೇಳಿದರು.
ಎರೆಮನಗನಹಳ್ಳಿ ಗ್ರಾಮದಲ್ಲಿ ಡಾ. ಬಿಆರ್ ಅಂಬೇಡ್ಕರ್ ಪುತ್ತಾಳಿ ಮತ್ತು ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು ಎಂಬ ಜನರ ಬೇಡಿಕೆ ಈಡೇರಿಸುವುದು ನನ್ನ ಜವಾಬ್ದಾರಿಯಾಗಿದೆ. ಹಾಗಾಗಿ ಶೀಘ್ರದಲ್ಲೇ ಭವನಕ್ಕೆ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬೇಕಾಗುವ ಸೌಲಭ್ಯ ಒದಗಿಸಿಕೊಡಲು ಈಗಾಗಲೇ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಕಳುಹಿಸಿದ್ದೇನೆ. ಜತೆಗೆ ಗ್ರಾಮದೊಳಗೆ ರಸ್ತೆ ಚರಂಡಿ ಮತ್ತು ಕುಡಿಯುವ ನೀರು ಇವುಗಳನ್ನು ತುರ್ತಾಗಿ ಮಾಡಿಸಲು ಕ್ರಮ ವಹಿಸುತ್ತೇನೆ. ಎರೆಮನಗನ ಹಳ್ಳಿಯಿಂದ ನನಗೆ ಹೆಚ್ಚು ಮತ ಕೊಡುವ ಮೂಲಕ ನನ್ನನ್ನು ಶಾಸಕರಾಗಿ ಆಯ್ಕೆ ಮಾಡಿದ್ದೀರಿ. ಋಣ ತೀರಿಸಲು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನು ಹಂತ ಹಂತವಾಗಿ ಮಾಡುತ್ತೇನೆ ಎಂದು ಹೇಳಿದರು.
ನಾಮ ಫಲಕ ಉದ್ಘಾಟನೆ: ಡಾಕ್ಟರ್ ಅಂಬೇಡ್ಕರ್ ನಗರದಲ್ಲಿ ಅಂಬೇಡ್ಕರ್ ಸಂಘದ ಅವರ ನಾಮಫಲಕವನ್ನು ಶಾಸಕ ಡಿ. ರವಿಶಂಕರ್ ಉದ್ಘಾಟಿಸಿದರು. ಸಂದರ್ಭದಲ್ಲಿ ಪ್ರಾಂಶುಪಾಲ ಡಾ.ಕೃಷ್ಣ, ನಿವೃತ್ತ ಶಿಕ್ಷಕ ಪುಟ್ಟಣ್ಣಯ್ಯ, ರೈಸ್ ಮಿಲ್ ನಟರಾಜ್, ರವಿಕುಮಾರ್, ಸೈಯದ್, ಇಸ್ರಾದ್, ಸಂಘದ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷ ಮಹದೇವ್, ಕಾರ್ಯದರ್ಶಿ ಮಹದೇವ್, ಖಜಾಂಚಿ ದೇವರಾಜ್, ಸಹಕಾರ್ಯದರ್ಶಿ ಲಕ್ಕಯ್ಯ, ಸಲಹೆಗಾರ ವೈ.ಎ.ಸುಲೇಂದ್ರ, ಸಣ್ಣಸ್ವಾಮಿ, ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಶಾಸಕ ಡಿ.ರವಿಶಂಕರ್ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಉದಯ್, ಗ್ರಾಮದ ಮುಖಂಡರಾದ ಧರ್ಮರಾಜ್, ಸುಲೇಂದ್ರ, ಚೆಲುವ, ಸತೀಶ್, ಲಕ್ಷ್ಮಣ, ಯುನಿಕ್, ಸಣ್ಣ ಸ್ವಾಮಿ ಪ್ರಕಾಶ್, ಭರತ್, ಚೆನ್ನಕೇಶವ, ಹುಚ್ಚಯ್ಯ ಸುರೇಶ್, ರವಿ, ಸ್ವಾಮಿ, ಸಂತೋಷ್, ಮಂಜು, ರವಿಕುಮಾರ್, ಪವನ್, ಪುನೀತ್, ಹನುಮಂತ, ರಮೇಶ್, ಚನ್ನಕೇಶವ, ದ್ಯಾವಣ್ಣ ಸೇರಿದಂತೆ ಇತರರು ಇದ್ದರು.