

ರಾಯಚೂರು: ಪ್ರಜಾಪ್ರಭುತ್ವ ಎಂದರೆ ಪ್ರಜೆಗಳದ್ದೇ ಆಳ್ವಿಕೆ ಮತ್ತು ಸಂವಿಧಾನವೆಂದರೆ ಜನರು ಹಕ್ಕು, ಕರ್ತವ್ಯಗಳನ್ನು ಕಾನೂನಿನ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯುವ ಗ್ರಂಥವಾಗಿದೆ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಸ್ಥಳೀಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಜಗತ್ತಿಗೆ ಸಾರುವ ಮೂಲಕ ಪ್ರಜಾಪ್ರಭುತ್ವದ ಮೂಲ ಉದ್ಧೇಶವನ್ನು ಸಾರುತ್ತಿರುವ ಮಾದರಿ ರಾಷ್ಟ್ರವಾಗಿದೆ ಎಂದರು.
ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ತರುವಂತಹ ವ್ಯವಸ್ಥೆಯ ಮೂಲ ಮಂತ್ರದೊಂದಿಗೆ ಸಂವಿಧಾನ ರಚಿಸಲಾಗಿದ್ದು, ಸಂವಿಧಾನದ ಮೂಲ ತತ್ತ್ವದಡಿ ಪ್ರತಿಯೊಬ್ಬರು ನಡೆದುಕೊಳ್ಳಬೇಕು. ಜನರಿಂದ, ಜನರಿಗಾಗಿ ಜನರಿಗೋಸ್ಕರ ಅಭಿವೃದ್ಧಿ ಕಾರ್ಯಗಳನ್ನು ರೂಪಿಸಲಾಗುತ್ತಿದೆ.
ಸಂವಿಧಾನ ಪ್ರಜಾಪ್ರಭುತ್ವದ ಆತ್ಮ ಎಂದೇ ಬಿಂಬಿತವಾಗಿದ್ದು, ಅದನ್ನು ಒಪ್ಪಿಕೊಂಡಾಗ ಮಾತ್ರ ನ್ಯಾಯಯುತವಾದ, ಶಾಂತಿಯುತ, ಅಭಿವೃದ್ಧಿ ಪೂರಕ ಮಾದರಿ ಸಮಾಜವನ್ನು ನಿರ್ಮಾಣ ಮಾಡುವ ಅಂಬೇಡ್ಕರರ ಆಶಯ ಸಾಕಾರಗೊಳ್ಳಲಿದೆ ಎಂದು ಎನ್.ಎಸ್.ಬೋಸರಾಜು ಹೇಳಿದರು.
ಈ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಸಾಮೂಹಿಕ ವಾಚನ ಮಾಡಲಾಯಿತು. ಇದಕ್ಕೂ ಮೊದಲು ಅಂಬೇಡ್ಕರ್‌ರ ಪುತ್ಥಳಿಗೆ ಸಚಿವರು ಮತ್ತು ಅಕಾರಿಗಳು ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ, ಜಿ.ಪಂ. ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ಯೋಜನಾಕಾರಿ ಡಾ.ಟಿ.ರೋಣಿ, ಮುಖ್ಯ ಲೆಕ್ಕಾಕಾರಿ ವಿಜಯಶಂಕರ, ಯೋಜನಾ ನಿರ್ದೇಶಕ ವಿ.ಪ್ರಕಾಶ, ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಆರ್.ಶಿವಕುಮಾರ, ಸಹಾಯಕ ಆಯುಕ್ತೆ ಮಹೆಬೂಬಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಈರೇಶ ನಾಯಕ ಉಪಸ್ಥಿತರಿದ್ದರು.