

ಬೆಂಗಳೂರು: ರಾಷ್ಟ್ರದ ಏಕತೆ, ಸಮಾನತೆ, ಭ್ರಾತೃತ್ವವನ್ನು ಕಾಯ್ದುಕೊಂಡ ಕೀರ್ತಿ ನಮ್ಮ ಸಂವಿಧಾನದ್ದು. ಈ ಮಹಾ ಗ್ರಂಥ ನಮ್ಮ ದೇಶಕ್ಕಷ್ಟೆ ಅಲ್ಲದೆ ಇತತ ದೇಶಗಳಿಗೂ ಮಾದರಿಯಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ.ಸುರೇಶ್ ತಿಳಿಸಿದರು.
ಬೆಂಗಳೂರಿನ ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಭಾನುವಾರ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 1950ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿಯು ಭಾರತೀಯ ಸಂವಿಧಾನದ ಕರಡನ್ನು 1949ರ ನ.26ರಂದು ಅಂಗೀಕರಿಸಿದ ಮತ್ತು ಅಧಿಕೃತವಾಗಿ ಜಾರಿಗೆ ತಂದ ದಿನದ ಸವಿನೆನಪಿಗಾಗಿ ಈ ದಿನವನ್ನು ಗಣರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಆಹಾರ ಉತ್ಪಾದನೆಗೆ ರೈತರ ಸಾಥ್:
ಇಂದಿಗೂ ಕೃಷಿ ನಮ್ಮ ದೇಶದ ಜೀವನಾಡಿಯಾಗಿದೆ. ಲಕ್ಷಾಂತರ ಕೃಷಿಕರಿಗೆ ಬದುಕು ಕಟ್ಟಿಕೊಟ್ಟಿದ್ದು, ಈ ಬೃಹತ್ ರಾಷ್ಟ್ರದ ಆಹಾರ ಭದ್ರತೆ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಇತ್ತೀಚೆಗೆ ಹೆಚ್ಚುತ್ತಿರುವ ಹವಾಮಾನ ಬದಲಾವಣೆ, ಪ್ರಾಕೃತಿಕ ಅವಘಡಗಳು ಕೃಷಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕಳೆದ ಬಾರಿ ದೇಶದಲ್ಲಿ ದಾಖಲೆ ಪ್ರಮಾಣದ 329.68 ದಶಲಕ್ಷ ಟನ್ ಹಾಗೂ ಕರ್ನಾಟಕದಲ್ಲಿ 14.35 ದಶಲಕ್ಷ ಟನ್ ಆಹಾರ ಉತ್ಪಾದನೆ ಸಾಧಿಸುವಲ್ಲಿ ನಮ್ಮ ಕೃಷಿಕರು ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಸಣ್ಣ, ಅತಿ ಸಣ್ಣ ರೈತರ ಸಂಖ್ಯೆ ಹೆಚ್ಚಳ:
ರಾಷ್ಟ್ರದಲ್ಲಿ ಪ್ರಸ್ತುತ ಕೃಷಿ ನವೋದ್ಯಮಗಳ ಪ್ರಮಾಣ ಕೇವಲ ಶೇ.10ರಷ್ಟಿದ್ದು, ಈ ಕ್ಷೇತ್ರದಲ್ಲಿರುವ ವಿಫುಲ ಅವಕಾಶಗಳನ್ನು ಬಳಸಿ ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಕೃಷಿ ನವೋದ್ಯಮಗಳನ್ನು ಆರಂಭಿಸಲು ವಿವಿ ಕಾರ್ಯೋನ್ಮುಖವಾಗಲಿದೆ. ರಾಷ್ಟ್ರದಲ್ಲಿ ಸಣ್ಣ ಮತ್ತು ಅತಿ ಸಣ್ಣ ಕೃಷಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 2030ರ ವೇಳೆಗೆ ಶೇ.87 ಕೃಷಿಕರು ಶೇ.70 ಆಹಾರ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಕುಲಪತಿಯವರು ವಿವರಿಸಿದರು.
ಇದೇ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ಸೇನೆಯ ಕರ್ನಲ್ ಎಂ.ಜಿ.ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.