ಸಂವಿಧಾನ ನಮ್ಮ ಧರ್ಮಗ್ರಂಥ

DSC_4442
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಿಧಾನ ಓದು ಕಾರ್ಯಕ್ರಮದಲ್ಲಿ ವಿವಿ ಕುಲಸಚಿವ ಎಸ್.ಎನ್.ರುದ್ರೇಶ್ ಮಾತನಾಡಿದರು.
Published on

ಬಳ್ಳಾರಿ: ಭಾರತ ಸಂವಿಧಾನವು ನಮ್ಮ ಧರ್ಮಗ್ರಂಥವಿದ್ದಂತೆ. ಅದನ್ನು ಪವಿತ್ರವಾಗಿ ಕಾಣಬೇಕು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎನ್.ರುದ್ರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಿಧಾನ ಓದು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನದ ಮೂಲವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ನಾವು ಭಾರತದ ಇತಿಹಾಸವನ್ನು ಓದಬೇಕು. ಸಂವಿಧಾನದ ಚೌಕಟ್ಟಿನಡಿ ಎಲ್ಲರೂ ಸಮಾನರು ಎಂಬ ತತ್ವ ಸಾರಿದವರು ಅಂಬೇಡ್ಕರ್ ಅವರು. ಸಂವಿಧಾನ 42 ಮತ್ತು 44ನೇ ಕಲಂಗಳನ್ನು ಓದಿದಾಗ ಕಾನೂನಾತ್ಮಕ ನೆಲೆಗಟ್ಟಿನಲ್ಲಿ ನಮ್ಮ ಸಂವಿಧಾನ ರೂಪುಗೊಂಡಿರುವುದನ್ನು ತಿಳಿಯಬಹುದು.ರಾಷ್ಟ್ರಪತಿ ಭವನದಲ್ಲಿರುವ ಸಂವಿಧಾನದ ಮೂಲಪ್ರತಿಯನ್ನು ಪ್ರತಿಯೊಬ್ಬ ಭಾರತೀಯನು ಒಮ್ಮೆ ನೋಡಿ ಪಾವನರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಸಾಹೇಬ್ ಅಲಿ ಎಚ್ ನಿರಗುಡಿ ಮಾತನಾಡಿ, ಸಂವಿಧಾನದ ಮೂಲಭೂತ ಹಕ್ಕುಗಳು ದೇಶದ ನಾಗರಿಕರ ಹಿತ ಕಾಯುತ್ತಿವೆ. ಸ್ವಾತಂತ್ರ್ಯ ನಂತರ ಜಾರಿಗೆ ಬಂದಿರುವ ಸಂವಿಧಾನದ ಅರಿವು ಮೂಡಿಸುವ ಕಾರ್ಯ ದೇಶದೆಲ್ಲೆಡೆ ನಡೆಯಬೇಕಿದೆ. ವಿವಿಧತೆಯಲ್ಲಿ ಏಕತೆ ಎಂಬ ಘೋಷವಾಕ್ಯ ನಮ್ಮ ದೇಶಕ್ಕೆ ಅನ್ವಯವಾಗಿಸಿರುವುದು ಸಂವಿಧಾನ ಎಂದರು.

ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಮೋಹನದಾಸ್ ಅವರು ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯದ ನಂತರದ ಘಟನಾವಳಿಗಳನ್ನು ಹಾಗೂ ಸಂವಿಧಾನ ರಚನೆಯ ಹಿನ್ನೆಲೆಯ ಕುರಿತು ವಿವರಿಸಿದರು.

ಈ ವೇಳೆ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಸಂವಿಧಾನದ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಸಾಮೂಹಿಕವಾಗಿ ಬೋಧಿಸಲಾಯಿತು. ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ್ ಓಲೇಕಾರ್, ವಿತ್ತಾಧಿಕಾರಿ ಪ್ರೊ.ಸದ್ಯೋಜಾತಪ್ಪ, ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net