ಸಂವಿಧಾನ ಪ್ರತಿಯೊಬ್ಬರ ಪವಿತ್ರ ಗ್ರಂಥ: ಶಾಮ್ ಪ್ರಸಾದ್

samvindana - Copy
Published on

ಮಡಿಕೇರಿ: ಡಾ.ಬಿ.ಆರ್.ಅಂಬೇಡ್ಕರ್‌ರವರು ಬರೆದಿರುವ ಸಂವಿಧಾನ ಪ್ರತಿಯೊಬ್ಬ ಭಾರತೀಯ ನಾಗರಿಕರಿಗೆ ಪವಿತ್ರ ಗ್ರಂಥವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಎಚ್.ಸಿ.ಶಾಮ್ ಪ್ರಸಾದ್ ಹೇಳಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಹಕಾರದಲ್ಲಿ ವಿಶೇಷ ಘಟಕ ಯೋಜನೆಯಡಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್‌ರವರ ಓದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಭಾರತ ಸಂವಿಧಾನ ವಿಶ್ವದಲ್ಲಿ ಶ್ರೇಷ್ಠ ಸಂವಿಧಾನವಾಗಿದ್ದು, ಮಾದರಿಯಾಗಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ವಿವರಿಸಲಾಗಿರುವ ಅಂಶಗಳು ಸಾರ್ವಕಾಲಿಕ ದಾಖಲೆಯಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಓದು ವ್ಯಾಪ್ತಿ ಸಮುದ್ರದಷ್ಟು ವಿಶಾಲವಾದದ್ದು ಹಾಗೂ ಆಳವಾದದ್ದು ಎಂದರು.


ಡಾ.ಅಂಬೇಡ್ಕರ್‌ರವರು ರಚಿಸಿದ ಸಂವಿಧಾನದ ಕಾನೂನು ವ್ಯಾಪ್ತಿಯಲ್ಲಿ ನಾವೆಲ್ಲರೂ ಒಳಗೊಂಡಿದ್ದೇವೆ. ಎಲ್ಲರಿಗೂ ಸಂವಿಧಾನ ಬದ್ಧವಾದ ಹಕ್ಕುಗಳನ್ನು ನೀಡಲು ಶ್ರಮಿಸಿದ್ದಾರೆ. ಆ ನಿಟ್ಟಿನಲ್ಲಿ ಮಹಾ ನಾಯಕ ಅಂಬೇಡ್ಕರ್‌ರವರನ್ನು ಸದಾ ಸ್ಮರಿಸಬೇಕಿದೆ. ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿಯಲ್ಲ, ಶಕ್ತಿ. ಅಸಮಾನತೆಯನ್ನು ಹೋಗಲಾಡಿಸಲು ಮೂಡಿ ಬಂದ ಅಲೆ ಎಂದರೆ ತಪ್ಪಾಗಲಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ನುಡಿದರು.


ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್‌ರವರು ಕಾನೂನು ಸಚಿವರಾಗಿ ಹಿಂದೂ ಕೋಡ್ ಬಿಲ್ ಜಾರಿಗೊಳಿಸುವ ಮೂಲಕ ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಹಕ್ಕುಗಳನ್ನು ನೀಡಿದ್ದಾರೆ. ಇದರ ಪ್ರತಿಫಲವಾಗಿ ಪುರುಷ ಮತ್ತು ಮಹಿಳೆಯರು ಸಮಾನವಾಗಿ ಬದುಕಲು ಸಾಧ್ಯವಾಗಿದೆ ಎಂದು ವಿವರಿಸಿದರು.


ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಹೇಗೆ ಕಾನೂನುಗಳನ್ನು ತರಬೇಕು ಎಂಬ ಬಗ್ಗೆ ಸಂವಿಧಾನದಲ್ಲಿ ಅಂಬೇಡ್ಕರ್‌ರವರು ವಿವರಿಸಿದ್ದಾರೆ. ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ಹಾಗೆಯೇ ರಾಜ್ಯ ನಿರ್ದೇಶಕ ತತ್ವಗಳು ಹೀಗೆ ಹಲವು ಅಂಶಗಳನ್ನು ವಿವರಿಸುವ ಮೂಲಕ ಭಾರತಕ್ಕೆ ಮಾದರಿಯಾದ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ನೀಡಿದ್ದಾರೆ ಎಂದರು.


ಮದೆನಾಡು ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಮಾತನಾಡಿ, ಅಂಬೇಡ್ಕರ್‌ರವರು ಜ್ಞಾನ ಮತ್ತು ಸಾಮಾಜಿಕ ನ್ಯಾಯದ ಸಂಕೇತ. ಅವರ ಬದುಕಿನ ೬೫ ವರ್ಷಗಳ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಕಲ್ಪಿಸುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬುದು ಅಂಬೇಡ್ಕರ್ ಅವರ ಧ್ಯೇಯೋದ್ದೇಶವಾಗಿದೆ ಎಂದರು.


೬೪ ಪದವಿಗಳನ್ನು ಪಡೆಯುವ ಮೂಲಕ ವಿಶ್ವದ ಜ್ಞಾನಿಯಾಗಿದ್ದಾರೆ. ಸಮಾನತೆ, ಭ್ರಾತೃತ್ವ, ಸಹೋದರತೆಯನ್ನು ಅಂಬೇಡ್ಕರ್‌ರವರು ಎತ್ತಿ ಹಿಡಿದಿದ್ದಾರೆ. ಭಾರತ ಸಂವಿಧಾನವು ೧,೧೭,೩೬೯ ಪದಗಳು, ೪೬೮ ವಿಧಿಗಳು ಮತ್ತು ೧೨ ಅನುಸೂಚಿಗಳು ಹಾಗೂ ೨೫ ಭಾಗಗಳನ್ನು ಒಳಗೊಂಡಿದೆ. ಇಂತಹ ಮಹಾ ಸಂವಿಧಾನವನ್ನು ರಚಿಸಿದ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರಿಗೆ ಸಲ್ಲುತ್ತದೆ ಎಂದು ವಿವರಿಸಿದರು.


ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಮಾತನಾಡಿ ಪ್ರತಿಯೊಬ್ಬರೂ ಜೀವನದಲ್ಲಿ ಸಂದೇಶವಾಗಬೇಕು. ಅಂಬೇಡ್ಕರ್ ಅವರಂತೆ ಹೆಚ್ಚಿನ ಅಧ್ಯಯನ ಮಾಡಬೇಕು ಎಂದು ಹೇಳಿದರು.


ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್‌ರವರು ಭಾರತ ಸಂವಿಧಾನದ ಪೀಠಿಕೆ ಓದಿದರು.


ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಆಡಳಿತ ಸಹಾಯಕ ಜಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net