

ಮೈಸೂರು: ಮನುಷ್ಯ ಮತ್ತು ಪರಿಸರ, ಮನುಷ್ಯ ಹಾಗೂ ಮನುಷ್ಯರ ನಡುವೆ ಸಮಸ್ಯೆಗಳು ಬರುತ್ತವೆ. ಇಂತಹ ಸಮಯದಲ್ಲಿ ಸಂವಿಧಾನವು ಮಾನವನ ಬದುಕಿಗೆ ಚೌಕಟ್ಟನ್ನು ಒದಗಿಸುತ್ತದೆ ಎಂದು ಕಾನೂನು ಅಧ್ಯಯನ ಸಂಸ್ಥೆಯ ಅಧ್ಯಕ್ಷ ಟಿ.ಆರ್.ಮಾರುತಿ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿದ್ಯಾರ್ಥಿಗಳ ಸಂಘವು ಭಾರತೀಯ ಸಂವಿಧಾನ ಮತ್ತು ಪ್ರಸ್ತುತ ಸವಾಲು ಕುರಿತು ಶುಕ್ರವಾರ ಆಯೋಜಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದರು.
ಇಲ್ಲಿ ಹಕ್ಕು ಮತ್ತು ಕರ್ತವ್ಯದ ಮೂಲಕ ಸ್ವಾತಂತ್ರ್ಯ ನೀಡುವುದರೊಂದಿಗೆ ನಮ್ಮ ಜವಾಬ್ದಾರಿಗಳೇನು ಎಂಬುದನ್ನು ತಿಳಿಸುವ ಜಾಣ್ಮೆ ಅಡಗಿದೆ ಎಂದು ಹೇಳಿದರು.
ಸಂವಿಧಾನ ರಚನೆ ಸಂದರ್ಭದಲ್ಲಿ ಅಂಬೇಡ್ಕರ್ ವಿದೇಶಗಳ ಸುಮಾರು 65 ಸಂವಿಧಾನವನ್ನು ಅಧ್ಯಯನ ಮಾಡಿದ್ದರು. ಹೀಗಾಗಿಯೇ ನಮ್ಮ ಸಂವಿಧಾನ ಇತರೆಡೆಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ. ಆರಂಭದಲ್ಲೇ ಕಾಣುವ ಭಾರತೀಯರಾದ ನಾವು ಎಂಬ ವಾಕ್ಯವು ದೇಶದ ಬಗೆಗಿನ ನಮ್ಮ ಜವಾಬ್ದಾರಿ ಹೆಚ್ಚಿಸಿದೆ ಎಂದು ತಿಳಿಸಿದರು.
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎಂ.ಚಂದ್ರಶೇಖರ್, ಶಿಕ್ಷಕ ಸಲಹೆಗಾರ್ತಿ ಬಿ.ನಿವೇದಿತಾ, ಕಾರ್ಯದರ್ಶಿ ಮನೋಜ್ ಕುಮಾರ್ ಭಾಗವಹಿಸಿದ್ದರು.